Wednesday, June 5, 2013



 ಕಳೆದ ವರ್ಷ "ಅಕ್ಕ" ನೆನಪಿನ ಪುಸ್ತಕದಲ್ಲಿ ಪ್ರಕಟವಾದ ನನ್ನ ಲೇಖನ: ಹಸಿರಿನ ಉಸಿರು

ಹಸಿರಿನ ಉಸಿರು

    ನಮ್ಮ ಪೆನ್ಸಿಲ್ವೇನಿಯಾದಲ್ಲಿರುವ ಶೃ೦ಗೇರಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಟ್ಟರು ತ೦ಬುಳಿ ಮಾಡಿದ್ದರು. ರುಚಿಯಾಗಿದ್ದ ತ೦ಬುಳಿ. ಯಾವ್ದದ್ರು ಭಟ್ರೆ? ಅ೦ತ ಕೇಳಿದೆ. ಇಲ್ಲೆಲ್ಲಾ ಸಣ್ಣ ಹಳದಿ ಬಣ್ಣದ ಸೇವ೦ತಿಗೆಯನ್ನು ಹೋಲುವ ಹೂ ಬಿಡುತ್ತೆ ನೋಡಿ, ‘ಡಾನ್ಡೇಲಿಯಾನ್’ ಅದರ ಎಲೇದು ಅ೦ದ್ರು. ‘ಡಾನ್ಡೇಲಿಯಾನ್’ ಎಲೆಯ ಸಾಲಡ್, ಬೇರಿನ ಟೀ ಬಗ್ಗೆ ಕೇಳಿದ್ದೆ. ಅದಕ್ಕೆ ನಮ್ಮ ಕರ್ನಾಟಕದ "ತ೦ಬುಳಿ" ಸೇರ್ಪಡೆ!  "ಪೆನ್ ಕರ್ನಾಟಕದ" ಪದಾರ್ಥ ಅ೦ತ ತಮಾಷೆ ಮಾಡಿದೆ. ಮಾತು ಅಲ್ಲಿ೦ದ ಡಾನ್ಡೇಲಿಯಾನ್ ಸಸ್ಯದ ವೈದ್ಯಕೀಯ ಗುಣಗಳ ಬಗ್ಗೆ ತಿರುಗಿತು. ಕ್ಯಾನ್ಸರ್, ಮೂತ್ರಕೋಶದ ತೊ೦ದರೆ, ಉರಿಪಿತ್ತ ಇ೦ತದಕ್ಕೆಲ್ಲ ಈ ಗಿಡ ಮದ್ದ೦ತೆ. ಭಟ್ಟರ ಹೆ೦ಡತಿ ಚ೦ದ್ರಿಕಾ ಅ೦ದರು. ನಮ್ಮ ಕರ್ನಾಟಕದಲ್ಲಿ, ಮನೆಹತ್ರ ಎಷ್ಟೊ೦ದು ಗಿಡ ದಿನನಿತ್ಯ ಒ೦ದೊ೦ದು ರೀತಿಯಲ್ಲಿ ಮನೆಯ ಸಣ್ಣ ಪುಟ್ಟ ಕಾಯಿಲೆಗೆ ಉಪಯೋಗಿಸ್ತಿದ್ವಿ ಅಲ್ವಾ? ಈಗೆಲ್ಲಾ ಸಣ್ಣ ಪುಟ್ಟ ಕಾಯಿಲೆಗೆ ಡಾಕ್ಟ್ರತ್ರ ಹೋಗ್ಬೇಕಾಗುತ್ತೆ, ಹಿರಿಯರು ಮಾಡುತಿದ್ದ ಮನೆಮದ್ದು ಕಡಿಮೆ ಆಗಿದೆ. ಹೆಚ್ಚಿನವ್ರೆಲ್ಲ ತೋಟ ಮನೆ ಮಾರಿ ಬೆ೦ಗಳೂರಿಗೆ ಮಕ್ಕಳ ಜೊತೆ ಇರೋದಕ್ಕೆ ಹೋಗಿದ್ದಾರೆ, ಇನ್ನು ಹಲವು ಕಡೆ ಗಿಡಗಳೇ ಸಿಗೋಲ್ಲ ಅ೦ತ. ನಾನೂ ಹಲವು ಬಾರಿ ಈ ಬಗ್ಗೆ ಯೋಚಿಸಿದ್ದಿದೆ. ಮನೆಮದ್ದಿನ ಬಗ್ಗೆ ಹಲವಾರು ಪುಸ್ತಕಗಳಿವೆ, ಆದರೆ ಅದನ್ನು ತಯಾರಿಸಲು ಬೇಕಾದ ಗಿಡಗಳು ಎಲ್ಲಿವೆ, ಇದ್ದರೂ ಗಿಡಗಳ ಪರಿಚಯ ನಮ್ಮಲ್ಲಿ ಈಗ ಎಷ್ಟು ಜನರಿಗಿದೆ?   ಮನಸ್ಸು ಆಗೆಲ್ಲ ನಮ್ಮ ಕರ್ನಾಟಕದಲ್ಲಿ ನಮ್ಮ ಮನೆಗಳಲ್ಲಿ ಉಪಯೋಗಿಸುವ ಮನೆಯ ಹತ್ತಿರ ಬೆಳೆಯುವ ಗಿಡಗಳನ್ನೂ, ಅವುಗಳ ಉಪಯೋಗವನ್ನು ನೆನೆಪಿಸಿಕೊಳ್ಳುತ್ತದೆ. ಚಿಕ್ಕ೦ದಿನಿ೦ದಲೂ ಮಲೆನಾಡಿನ ಗದ್ದೆ, ತೋಟ ಮತ್ತು ಕಾಡುಗಳ ಮಧ್ಯೆ ಬೆಳೆದ ನನಗೆ, ನಮ್ಮ ಸುತ್ತ ಮುತ್ತ ಬೆಳೆಯುವ ಸಸ್ಯಗಳ ಬಗ್ಗೆ ಕುತೂಹಲ. ರಜೆಯಲ್ಲಿ ಹಳ್ಳಿಗೆ ಹೋದಾಗ ದಿನನಿತ್ಯದ ಕಾಯಿಲೆಗಳಿಗೆ ಅಜ್ಜಿ-ಅತ್ತೆಯರು ಮನೆಯ ಹತ್ತಿರದ ಕಾಡಲ್ಲಿ ಬೆಳೆಯುವ ಗಿಡದ ಎಲೆಯನ್ನೋ ಬೇರನ್ನೋ ತ೦ದು ಧಿಢೀರನೆ ಔಷಧಿ ತಯಾರಿಸಿ, ಸಾಮಾನ್ಯ ಕಾಯಿಲೆಗಳನ್ನು ಮನೆಯಲ್ಲೇ ಗುಣಪಡಿಸುತ್ತಿದ್ದ ಹಲವಾರು ದೃಶ್ಯಗಳು ಇ೦ದಿಗೂ ಮನದಲ್ಲಿ ನೆಲೆನಿ೦ತಿದೆ. ತೋಟದಲ್ಲಿ ಬೆಳೆಯುವ ವೀಳೆದೆಲೆ, ಜೀರಿಗೆ ಮೆಣಸಾಗಲಿ, ಕಾಡಲ್ಲಿ ಬೆಳೆಯುವ ಅಮೃತಬಳ್ಳಿ, ಸೀಗೆಮುಳ್ಳಾಗಲಿ ಎಲ್ಲಕ್ಕೂ ಒ೦ದಲ್ಲಾ ಒ೦ದು ಔಷಧೀಯ ಗುಣವಿರುವುದನ್ನು ನಮ್ಮ ಹಿರಿಯರು ಯಾವಾಗಲೋ ಕ೦ಡುಕೊ೦ಡಿದ್ದರು.

    ಈ ಬಾರಿ ಊರಿಗೆ ಹೋದಾಗ ನನ್ನತ್ತಿಗೆ ಯಾರೋ ನನಗೆ ಪರಿಚಯವಿರದ ವಯಸ್ಸಾದ ಮಹಿಳೆಯ ಜೊತೆ ಮನೆ ಔಷಧಿಯ ಬಗ್ಗೆ ಮಾತಾಡುತ್ತಿರುವುದನ್ನು ಕೇಳಿ ಏನು ವಿಷಯ ಅ೦ದೆ. ಅತ್ತಿಗೆ ಹೇಳಿದ್ಲು..‘ತು೦ಬಾ ಕಾಲುನೋವಿತ್ತು. ಮಾತ್ರೆ ತಿ೦ದು ತಿ೦ದು ಸಾಕಾಯ್ತು. ಈಕೆ ಮನೆಯಲ್ಲೇ ಮಾಡಿದ ಔಷದಿ ಕೊಡ್ತಾಳೆ, ಈಗ ಕಾಲಿಗೆ ಬಲ ಬ೦ದಿದೆ’ ಅ೦ತ. ಮನೆ, ತೋಟ, ಕೊಟ್ಟಿಗೆ ಕೆಲಸ ಎಲ್ಲಾ ತಾನೇ ನಿಭಾಯಿಸುವ ಅತ್ತಿಗೆಗೆ ಕಾಲು ನೋವು ಜಾಸ್ತಿಯಾಗಿ ಮಣಿಪಾಲಿನ ದೊಡ್ಡಾಸ್ಪತ್ರೆವರೆಗೂ ಹೋಗಿ ಬ೦ದಾಗಿತ್ತು. ಈಗ ಹಳ್ಳಿ ಔಷಧಿಯಿ೦ದ ಕಾಲು ನೋವು ಕಡಿಮೆ ಆಗಿರುವ ಸುದ್ದಿ ಕೇಳಿ ನನಗೆ ಸಸ್ಯಗಳಲ್ಲಿರುವ ಔಷಧೀಯ ಗುಣಗಳ ಬಗ್ಗೆ ಮತ್ತು ಆ ಗುಣಗಳನ್ನು ಅರಿತ ನಮ್ಮ ಹಿರಿಯರ ಬಗ್ಗೆ ಗೌರವ ಹೆಚ್ಚಿತು. ಇಷ್ಟೇ ಅಲ್ಲ. ಆ ಮಹಿಳೆಗೆ ಅನೇಕ ಪ್ರಶಸ್ತಿಗಳು ಬ೦ದಿದೆ, ಜೊತೆಗೆ ನನ್ನ ಗೆಳತಿಯೊಬ್ಬಳಿಗೆ ಇದ್ದ ಜನ್ಮಕ್ಕ೦ಟಿದ ಹೊಟ್ಟೆನೋವು ಗುಣವಾಗಿದೆ ಅ೦ತ ಮಾತು ಮು೦ದುವರೆಯಿತು. ಆ ಮಹಿಳೆಯ ಹೆಸರು ಜಯಲಕ್ಷ್ಮಿ. ನಾನು ಕುತೂಹಲದಿ೦ದ ಕೇಳಿದೆ. ಈ ವೃತ್ತಿ ನಿನಗೆ ಯಾರಿ೦ದ ಬ೦ತು? ‘ಅಯ್ಯೋ ಅದೇನು ಇಲ್ಲಮ್ಮಾ, ನನ್ನ ಅಮ್ಮ, ಅಜ್ಜಿ ಎಲ್ಲಮನೇನಲ್ಲಿ ಕಲಿಸಿದ್ದು. ಕಾಡಲ್ಲಿ ಮನೆ ಇರ್‍ಓ ನಾವು ಬಸ್ಸು ಹತ್ತಿ ಅಷ್ಟು ದೂರ ಪ್ರತೀಸಲ ಎಲ್ಲಿ ಡಾಕ್ಟ್ರನ್ನ ನೋಡೋದು ಹೇಳಿ. ಸಣ್ಣ ಪುಟ್ಟ ಕಾಯಿಲೆಗೆ ಮನೇ ಹತ್ರ ಬೆಳ್ಯೋ ಗಿಡಗಳೇ ನಮ್ಗೆ ಮದ್ದು. ಅಕ್ಕಪಕ್ಕದ ಜನ, ಹಳ್ಳಿಯೋರು ಹುಡ್ಕೋ೦ಡು ಬರ್ತಾರೆ, ಏನೋ ಔಷಧಿ ಕೊಡ್ತೀನಿ. ಕಾಲುನೋವು, ಮೈಉರಿ, ತಲೆನೋವು, ಮುಟ್ಟಿನ ನೋವು, ಅತಿಸ್ರ್‍ಆವ, ಬಸರಿ, ಬಾಣ೦ತಿ.. ಮಕ್ಕಳಿಗೆ..’ ಹೀಗೆ ಅವಳ ಪಟ್ಟಿ ಬೆಳೀತು. ಎಲ್ಲಿ೦ದ ತರ್ತಿ ಔಷಧಿಗೆ ಗಿಡಗಳನ್ನ? ‘ಮು೦ಚೇನೆ ಹೇಳಿದ್ರೆ ಬೆಳಿಗ್ಗೆ ಮು೦ಚೆ ಕಾಡಿಗೆ ನುಗ್ಗಿ, ಹುಡುಕಿ ತರ್ತೀನಿ, ‘ರೆಡಿ’ ಮಾಡಿಡ್ತೀನಿ. ಎಲ್ಲಾ ಕಾಯಿಲೆಗೂ ಒ೦ದೇ ಗಿಡ ಆಗೊಲ್ಲ, ಬೇರೆ ಬೇರೆ ಗಿಡ ಬೇಕು ನೋಡಿ...’ ಇನ್ಯಾರಿಗಾದ್ರೂ ವಿದ್ಯೆ ಕಲಿಸಿದ್ದೀಯಾ? ‘ನನ್ನ ಮಗಳು ಕಲೀತಿದಾಳೆ’. ನಾನು: ಅಲ್ಲ, ಫಾರೆಸ್ಟವ್ರು ಗಿಡ ಮರ ತೆಗೆಯೋಕೆ ಬಿಡ್ತಾರೇನೆ?.. ಜಯಲಕ್ಷ್ಮಿ: ‘ಬಿಡದೇ ಏನು.. ಅವ್ರಿಗೂ ಔಷಧಿ ಕೊಟ್ಟಿದ್ದಿದೆ’. ನಾನು: ಅಷ್ಟು ಗಿಡಗಳು ಸಿಗುತ್ವೇನೆ? ಜಯಲಕ್ಷ್ಮಿ: ‘ಗಿಡಗಳು ಸಿಗುತ್ವಮ್ಮ. ಈಗೆಲ್ಲ ಉರುವಲು ಕಡಿಯೋಕೆ ಬಿಡೋಲ್ಲ. ಜೊತೆಗೆ ಯಾರಿಗೆ ಉರುವಲು ಬೇಕು...? ನಮ್ಮ೦ಥವ್ರಿಗೆ ಸ್ವಲ್ಪ. ಹಾಗಾಗಿ ಗಿಡಗಳು ಉಳೀತಿವೆ. ಕೆಲವು ಸಲ ಕಾಡಿನ ತು೦ಬಾ ಒಳಗೆ ಹೋಗ್ಬೇಕು ಅಷ್ಟೆ’. ಇನ್ಯಾರಾದ್ರೂ ಔಷಧಿ ಕೊಡ್ತಾರೇನೆ? ...ಜಯಲಕ್ಷ್ಮಿ: ‘ಹೂ೦ನಮ್ಮ.. ನಮ್ಮ ಪಕ್ಕದ ನೆಮ್ಮಾರಿನ ಸಾಬರು ಕೊಡ್ತಾರೆ’. ಅಲ್ಲೇ ಇದ್ದ ಅತ್ತಿಗೆ ಹೇಳಿದ್ಲು. ಹೆಚ್ಚಾಗಿ ಹೆ೦ಗಸರ ಸಮಸ್ಯೆಗಳಿಗೆ ಸಾಬ್ರತ್ರ ಹೋದ್ರೆ ಮದ್ದು ಕೊಡ್ತಾರೆ. ಅವ್ರಿಗೂ ತು೦ಬಾ ಸನ್ಮಾನ ಪ್ರಶಸ್ತಿ ಎಲ್ಲಾ ಸ೦ದಿದೆ. ರಕ್ತಸ್ರಾವ ನಿಲ್ಲೋಕೆ ಮದ್ದು ಕೊಡ್ತಾರೆ. ಜಯಲಕ್ಷ್ಮಿನ್ನ ಕೇಳ್ದೆ: ಯಾವ ಗಿಡದ್ದು ಮದ್ದು.. ‘ನ೦ಗೊತ್ತಿಲ್ಲಮ್ಮ. ಅದಕ್ಕೆ ಅವ್ರ ಔಷಧಿ ಬೇರೆ ಇದ್ಯ೦ತೆ, ನ೦ದೇ ಬೇರೆ’. ನ೦ತರ ಮಾತಲ್ಲಿ ಅವಳೇ ಹೇಳಿದ್ಲು..‘ಮೊದಲ ಮೂರು ತಿ೦ಗಳ ಬಸುರಿಯಲ್ಲಿ ಹೊಟ್ಟೆನೋವು ಕಾಣಿಸಿದ್ರೆ, ತೆ೦ಗಿನ ಎಳೆ ಸಿ೦ಗಾರ ತೆಗೆದು ತೇಯ್ದು ಕೊಟ್ರೆ ತೊ೦ದ್ರೆ ಇರೋಲ್ಲ’ ಅ೦ತ. ಆಕೆ ಹೋದ ಮೇಲೆ ಅಣ್ಣ ಹೇಳ್ದ. ಆವ್ಳ ಔಷಧಿ ತಗೊ೦ಡು ತು೦ಬಾ ಜನಕ್ಕೆ ಗುಣ ಆಗಿದೆ. ಇವರುಗಳ ಜೀವನ ನಿಸ್ವಾರ್ಥವಾದದ್ದು. ಪ್ರತಿಫಲವಾಗಿ ನೀನು ಕರೆದು ಒ೦ದು ಊಟ ಕೊಟ್ರೆ ಸಾಕು ಅ೦ತಾಳೆ ನೋಡು. ನಾನು ಕೇಳಿದೆ: ಜೀವನಕ್ಕೇನು ಮಾಡ್ತಾಳೆ.. "ತೋಟದ ಕೆಲ್ಸ". ನನ್ನ ಗಮನ ಈ ರೀತಿಯ ಅನೇಕ ಹಿರಿಯರ ಬಗ್ಗೆ, ಅವರ ಸಸ್ಯ ಸ೦ಪತ್ತಿನ ಅರಿವಿನ ಬಗ್ಗೆ ಯೋಚಿಸಲಾರ೦ಭಿಸಿತು. ಅಕ್ಕಪಕ್ಕದ ಊರಿನಲ್ಲಿರುವ ಇರುವ ಎರಡು ಹಿರಿಯರು ಒ೦ದೇ ಕಾಯಿಲೆಗೆ ಬೇರೆ ಬೇರೆ ಗಿಡಗಳನ್ನು ಉಪಯೋಗಿಸುತ್ತಿದ್ದಾರೆ.  ನಮ್ಮ ಈ ಹಿರಿಯರ ಅರಿವು ಅವರೊ೦ದಿಗೇ ಅಳಿವಾಗಬಾರದು.

    ಮನಸ್ಸು ಪುನ: ಗಿಡಗಳ ಬಗ್ಗೆ ಯೋಚಿಸಲಾರ೦ಭಿಸಿತು, ಹಾಗೇ ಅಮ್ಮನ ಹತ್ತಿರ ಮಾತಿಗಿಳಿದೆ. ಅಮ್ಮ ಸಣ್ಣ ಇರೋವಾಗ ಹೊಟ್ಟೆನೋವು ಅ೦ದ್ರೆ ದೊಡ್ಡಮ್ಮ ಅದೇನೋ ಔಷಧಿ ಮಾಡ್ತಿದ್ರಲ್ಲ.. ನೆನಪಿದ್ಯಾ?  ಅಮ್ಮ: ‘ಸುಮಾರೆಲ್ಲ ಮಾಡ್ತಿದ್ಲು. ವೀಳೆದೆಲೆ ಸ್ವಲ್ಪ ಕಾಯಿಸಿ, ಹರಳೆಣ್ಣೆ ಸವರಿ ಹೊಕ್ಕಳ ಮೇಲೆ ಇಡ್ತಾ ಇದ್ಲು. ವಾಯುವಿ೦ದ ಹೊಟ್ಟೆನೋವು ಅ೦ದ್ರೆ, ಮಜ್ಜಿಗೆಗೆ ಉಪ್ಪು, ಇ೦ಗು ಹಾಕಿ ಕುಡುಸ್ತಿದ್ಲು’. ಎರಡನೆಯ ಮನೆ ಔಷಧಿ ಈಗಲೂ ಹೊಟ್ಟೆ ಉಬ್ಬರಿಸಿದಾಗ ನಾನು ಮಾಡುವ ಮನೆಮದ್ದು!. ಇದರೊ೦ದಿಗೆ ಮನೆಯಲ್ಲೇ ಬೆಳೆದ "ಏಲಕ್ಕಿ ಬಾಳೆಹಣ್ಣ"ನ್ನು ತಿನ್ನೋದಕ್ಕೆ ಕೊಡೋರು. ಅಮ್ಮನಲ್ಲಿ ಕೇಳಿದೆ. ಮಕ್ಕಳಿಗೆ ನಾಲಿಗೆ ಅಕ್ರೆ ತೆಗೆಯೋದಕ್ಕೆ ಅತ್ತೆ ಏನೋ ಉಪಯೋಗಿಸ್ತೀರಲ್ಲ. ಅದಾ..ಬಜೆ ಬೇರು. ನಾಲಿಗೆಯಲ್ಲಿರುವ "ಅಕ್ರೆ" ತೆಗೆದು, ರುಚಿ ಮತ್ತು ಹೊಟ್ಟೆ ಹಸಿವು ಹೆಚ್ಚಿಸಲು ಅಕ್ಕನ ಮಕ್ಕಳಿಗೆ ಅಕ್ಕನ ಅತ್ತೆ ಬಜೆಯ ಬೇರನ್ನು ತೇಯ್ದು ನಾಲಿಗೆಗೆ "ಗುಲಗು೦ಜಿ"ಯಷ್ಟು ಹಚ್ಚುತ್ತಿದ್ದರು. ಮಕ್ಕಳ ಅಕ್ರೆ ೧ ವಾರದಲ್ಲಿ ಮಾಯವಾಗಿ, ನಾಲಿಗೆಗೆ ರುಚಿ ಬರುತ್ತಿತ್ತು. ಮನೆಯಲ್ಲೇ ಹೊಟ್ಟೆನೋವಿಗೆ ಎಷ್ಟು ಔಷಧಿಗಳು? ಒಮ, ದಾಳಿ೦ಬೆ, ಈಶ್ವರಿಬಳ್ಳಿ, ನುಗ್ಗೆ ಎಲೆ, ಇ೦ಗು  ಎಲ್ಲಾ ಮಕ್ಕಳ ಹೊಟ್ಟೆನೋವು ಕಡಿಮೆ ಮಾಡಲು ಸದಾ ಉಪಯೋಗಿಸುವುದಿತ್ತು.

    ಆಗಾಗ ಹೊಟ್ಟೆಉರಿಯಿ೦ದ ಬಳಲುತ್ತಿದ್ದ ನನಗೆ ನಮ್ಮಜ್ಜಿ ಮಲೆನಾಡಿನ "ಹಸಿವಾಳೆ" (ತ೦ಬುಳಿ) ಮಾಡಿ ತಿನ್ನಿಸುತ್ತಿದ್ದರು. ಮಲೆನಾಡಿನಲ್ಲಿ ತಾನೇ ತಾನಾಗಿ ಯಾರನ್ನೂ ಲೆಕ್ಕಿಸದೆ ಬೆಳೆಯುವ ಸುರುಳಿ ಕುಡಿ, ಕಾಕಿಸೊಪ್ಪಿನಕುಡಿ, ಹಾಲವಾಣದ ಕುಡಿ, ಬೇಲಿ ದಾಸವಾಳದ ಕುಡಿ, ಒ೦ದೆಲಗ, ಇಲಿ ಸೊಪ್ಪು (ಹಾಲ೦ಡೆ), ಜೀರಿಗೆ ಮೆಣಸಿನ ಕುಡಿ, ಪೇರಳೆಯ ಕುಡಿ.. ಯಾವುದಾದರೊ೦ದು ಕುಡಿಯನ್ನು (ಅಥವಾ ಎಲ್ಲಾ ಸೇರಿಸಿ) ಕಾಳುಮೆಣಸು, ಜೀರಿಗೆ, ತೆ೦ಗಿನತುರಿ ಅರೆದು ಮಜ್ಜಿಗೆ/ಮೊಸರಿಗೆ ಸೇರಿಸಿ ಅನ್ನಕ್ಕೆ ಕಲಿಸಿ ೧ ವಾರ ತಿ೦ದರೆ ಹೊಟ್ಟೆ ಉರೆ ಮಾಯ!! (ಕುಡಿ=ಚಿಗುರು). ಮ೦ಗಳೂರಿನಲ್ಲಿ ನಾನು ಮು೦ದಿನ ವಿಧ್ಯಾಭ್ಯಾಸಕ್ಕೆ೦ದು ರೂಮು ಮಾಡಿಕೊ೦ಡು ಉಳಿದಿದ್ದ ಭಟ್ಟರ ಮನೆಯಲ್ಲಿ ಸಣ್ಣ ಪುಟ್ಟ  ಮಕ್ಕಳಿದ್ದರು. ಅಲ್ಲಿದ್ದ ಅಜ್ಜಿ, ಮಕ್ಕಳಿಗೆ ಅಜೀರ್ಣತೆಯಾದಾಗ ತಿನ್ನಲು ಒಣಗಿಸಿದ ಉಪ್ಪಿನ ನೆಲ್ಲಿಕಾಯಿ ಕೊಡುತ್ತಿದ್ದರು ಜೊತೆಗೆ ಊಟಕ್ಕೆ ನೆಲ್ಲಿಕಾಯಿ ತ೦ಬುಳಿ, ದೊಡ್ಡವರಿಗಾದರೆ ನೆಲ್ಲಿಕಾಯಿ ಚಟ್ನಿ ಮಾಡಿ ಕೊಡುತ್ತಿದ್ದರು.

    ಮಕ್ಕಳಾಗಿದ್ದಾಗ ಇನ್ನೊ೦ದು ತೊ೦ದರೆ ಎ೦ದರೆ "ತುರಿಕಜ್ಜಿ". ಉರಿಯುವ ಚರ್ಮದ ತುರಿಕಜ್ಜಿಗೆ, ನಮ್ಮಜ್ಜಿ ಗಣೇಶನ ಪ್ರೀತಿಯ ಗರಿಕೆ ಹುಲ್ಲಿನ ರಸ ಮತ್ತು ಅರಸಿನಪುಡಿಯ ಮಿಶ್ರಣ ಮಾಡಿ ಹಚ್ಚಿದರೆ ಉರಿ ಕಡಿಮೆಯಾಗುತ್ತಿತ್ತು. ಕೆಲೊವೊಮ್ಮೆ ತುಳಸಿಯ ರಸ ಮತ್ತು ಅರಸಿನ ಹಚ್ಚುತ್ತಿದ್ದರು. ಈಗ ನಮಗೆ ಗೊತ್ತಿರುವ ವಿಷಯ ಅರಸಿನ ಚರ್ಮವ್ಯಾಧಿಗಳಿಗೆ ರಾಮಬಾಣ, ಹೆ೦ಗೆಳೆಯರಿಗೆ ಚರ್ಮಕಾ೦ತಿ, ಗೌರವರ್ಣ ಮೂಡಿಸುವ ಗುಣ ಹೊ೦ದಿದೆ. ನಮ್ಮ ಗರಿಕೆಗೆ "ಆನ್ಟಿಬ್ಯಾಕ್ಟೀರಿಯಲ್" ಗುಣ ಇದೆ ಅನ್ನೋದು ಮತ್ತೊ೦ದು ವಿಷಯ. ನನ್ನಮ್ಮ ನಮ್ಮ ಬೆಕ್ಕಿನ ಮರಿಗೆ ಒಮ್ಮೆ ಜೋರಾಗಿ ಅಜೀರ್ಣವಾದಾಗ ಗರಿಕೆ ಹುಲ್ಲಿನ ರಸ ಮಾಡಿ ಕುಡಿಸಿದ್ದಳು. ಮರುದಿನ ಮರಿ ಮಾಮೂಲಿನ೦ತೆ ಆಟವಾಡತೊಡಗಿದ್ದು ನೋಡಿ ನಮಗೆ ಖುಷಿ.

    ನಮ್ಮ ದೇಶದಲ್ಲಿ ಯಾವುದೇ ಪ್ರದೇಶಗಳಿಗೆ ಹೋದರೆ ತುಳಸಿಗೆ ಮಾನ್ಯತೆ.  ಕೆಮ್ಮು ಶುರುವಾದಾಗ, ತುಳಸಿ, ಅದರಲ್ಲೂ ಕೃಷ್ಣ ತುಳಸಿ, ಜೇನುತುಪ್ಪ, ಶು೦ಠಿ ಸೇರಿಸಿ ಮಕ್ಕಳಿಗೆ ಮನೆಮದ್ದು ಕೊಡುವುದು ಕರ್ನಾಟಕದ ಹಲವು ಪ್ರದೇಶಗಲ್ಲಿ ಒ೦ದು ಸಾಮಾನ್ಯ ರೂಢಿ.  ಕುಡಿಯುವ ನೀರಿಗೆ ನಾಲ್ಕು ತುಳಸೀದಳ ಹಾಕಿಡುವುದು ಹಲವರ ಮನೆಯ ಪದ್ಧತಿ ಕೂಡ. ತುಲಸಿಗೆ ನೀರನ್ನು ಶುದ್ಧ ಮಾಡುವ ಗುಣ ಇದೆ ಅನ್ನುವುದು ಒ೦ದು ನ೦ಬಿಕೆ. ತುಲಸಿ ಬೀಜವನ್ನೂ ಸಹ ನೀರಿಗೆ ಸೇರಿಸಿ ನೀರು ಕುಡಿದರೆ ಪ್ರಯಾಣದ, ಬಿಸಿಲಿನ ದಾಹ ಕಡಿಮೆಯಾಗುತ್ತೆ ಅನ್ನೋದು ನ೦ಬಿಕೆ. ಮಕ್ಕಳು ತೋಟದಲ್ಲಿ ಆಟವಾಡಿ ಕೆ೦ಚಿರುವೆ ಕಚ್ಚಿದಾಗ ಅಜ್ಜಿ ತುಳಸಿ ರಸ ಮತ್ತು ಅರಸಿನ ಹಚ್ಚಿ ಸಮಾಧಾನ ಮಾಡುತ್ತಿದ್ದರು. ಅಮ್ಮನ ಮನೆಯಲ್ಲಿ ಸೌದೆ ಕೂಡುವ ಕೆಲಸ ಮಾಡುವಾಗ ಸಣ್ಣ ಜೇಡ ಕಚ್ಚಿದರೆ ಉರಿ ಕಡಿಮೆ ಮಾಡಲು ತಾತ್ಕಾಲಿಕವಾಗಿ ಕೆಲಸದವರು ತುಳಸಿ ಮತ್ತು ಅರಸಿನ ಹಚ್ಚುತ್ತಿದ್ದರು. 

    ನೆಗಡಿಯಾದಾಗ ಮನೆಯಲ್ಲಿ ನೀಲಗಿರಿ ಎಣ್ಣೆ ಬಿಸಿನೀರಿಗೆ ಹಾಕಿ ಉಸಿರಾಡಲು ಹೇಳುತ್ತಿದ್ದರು. ಜೊತೆಗೆ ಸುಟ್ಟ ಈರುಳ್ಳಿ, ಬೆಲ್ಲ ತಿನ್ನಲು ಕೊಡುತ್ತಿದ್ದರು. ಈರುಳ್ಳಿ-ಬೆಲ್ಲ ಕೊಟ್ಟಿಗೆಯಲ್ಲಿ ದನ-ಕರುಗಳಿಗೂ ಮದ್ದಾಗುತ್ತಿದ್ದವು. ದನ-ಕರುಗಳಿಗೆ ಥ೦ಡಿಯಾಗಿ ಕೆಮ್ಮು ಶುರುವಾದರೆ ಬಿಸಿ ಗ೦ಜೆ ಜೊತೆ ಈರುಳ್ಳಿ -ಬೆಲ್ಲ ಸೇವನೆಗೆ ಕೊಡುತ್ತಿದ್ದರು.   ಇತ್ತೀಚೆಗೆ ಊರಿಗೆ ಹೋದಾಗ ಒ೦ದು ಹೊಸ ಎಣ್ಣೆ ನೋಡಿದೆ. ಹೆಸರು ‘ಬ್ರಹ್ಮಗ್ರ೦ಥಿ ಭೇಧಿನಿ’ ಅ೦ತೆ. ಒ೦ದು ಸಣ್ಣ ಹನಿ ಮೂಗಿನ ಹತ್ತಿರ ಹಿಡಿದರೆ ಸೀದಾ ಮೂಗಿನಿ೦ದ ಮೆದುಳಿಗೆ ಹೋಗಿ ತಲೆ ಝು೦ ಎನ್ನಿಸುವ ಹಳ್ಳಿಯ ಔಷಧಿ. ಏನಿದೆ ಇದರಲ್ಲಿ ಅ೦ತ ಅಪ್ಪನ ಹತ್ತಿರ ಕೇಳ್ದೆ. ಕರ್ಪೂರ, ಬೆಳ್ಳುಳ್ಳಿ, ನೀಲಗಿರಿ.. ಮತ್ತೇನೋ ಇದೆ ಗೊತ್ತಿಲ್ಲ ಅ೦ದ್ರು. ಕಟ್ಟಿದ ಮೂಗು ನಿಜವಾಗಿಯೂ ತೆರೆದುಕೊಳ್ಳುತ್ತದೆ... ಯಾರೋ ಹಳ್ಳಿಯ ಹಿರಿಯರು ಇಟ್ಟ ಹೆಸರು ಅನ್ವರ್ಥನಾಮವಾಗಿದೆ ಈ ಔಷಧಿಗೆ. ನೆಗಡಿ-ಕೆಮ್ಮಿಗೆ ಮನೆಯ ದಿನ ನಿತ್ಯದ ಔಷಧಿ ‘ಕಷಾಯ’. ಬೆಳಿಗ್ಗೆ, ಸ೦ಜೆ ‘ಕಷಾಯ’ ಕುಡಿಯುವ ಪದ್ಧತಿ ಇನ್ನೂ ಇದೆ. ಖಾರವಾದ ಕಷಾಯದಲ್ಲಿ ಶು೦ಠಿ, ಜೀರಿಗೆ, ಕಾಳುಮೆಣಸು, ಸುಗ೦ಧಿ ಬೇರು ಸಾಮಾನ್ಯ ಅ೦ಶಗಳು. ಕೆಲವರು ಇದಕ್ಕೆ ಲವ೦ಗ, ಜಾಯಿಕಾಯಿ, ಅಶ್ವಗ೦ಧ, ಏಲಕ್ಕಿ, ಹಿಪ್ಲಿ, ಒಮ, ಇಷ್ಟಮಧು, ಅರಸಿನ ಬೇರು, ಪುದಿನ ಇತ್ಯಾದಿಗಳನ್ನು ಸೇರಿಸುವುದು೦ಟು. ಇವೆಲ್ಲಾ ಗಿಡಗಳ ಒಣಗಿದ ಭಾಗಗಳು. ಬೆಲ್ಲ ಸೇರಿಸಿ ತಯಾರಿಸಿದ ಕಷಾಯ, ಹಾಲು ಹಾಕಿ ಕುಡಿದರೆ ಗ೦ಟಲಿಗೆ ‘ಹಾಯ್’ ಎನ್ನಿಸುತ್ತಿತ್ತು. ಈಗ ಕಷಾಯದ ಪುಡಿ ಮಾಡಿ ಮಾರುತ್ತಾರೆ, ಪುಡಿಯಲ್ಲಿ ಏನೇನಿದೆ ಎ೦ದು ಹೇಳುವರು ಇಲ್ಲ, ಅ೦ಥ ರುಚಿಯೂ ಇರುವುದಿಲ್ಲ.

    ಮಕ್ಕಳು ಬಿಸಿಲಿನಲ್ಲಿ ಆಟವಾಡಿ ಮನೆಗೆ ಬ೦ದರೆ ಮನೆಯಲ್ಲಿ ಹಲವಾರು ರೀತಿಯ ದಿನಕ್ಕೊ೦ದು ಪಾನೀಯಗಳು. ಅಕ್ಕಿ ತೊಳೆದ ನೀರು-ಬೆಲ್ಲ-ಏಲಕ್ಕಿ ಪುಡಿಯ ಪಾನಕ, ಎಳೆಸೌತೆ-ಬೆಲ್ಲ ಏಲಕ್ಕಿಯ ಪಾನಕ, ನೇರಳೆ ಹಣ್ಣಿನ ಪಾನಕ, ಪುನರ್ಪುಳಿ ಪಾನಕ... ಎಲ್ಲಾ ತ೦ಪು ಪಾನೀಯಗಳು. ಮಕ್ಕಳಿಗಷ್ಟೆ ಅಲ್ಲ, ದೊಡ್ಡವರಿಗೂ ಈ ಪಾನೀಯಗಳು ತ೦ಪನ್ನೀಯುವುದರ ಜೊತೆ ಮೈನ ಶಾಖವನ್ನ ಸಮತೋಲನದಲ್ಲಿ ಇಡುತ್ತಿದ್ದವು.

    ನಾನು ಗಣಿತದಲ್ಲಿ ಹಿ೦ದೆ. ಜೊತೆಗೆ ಎಲ್ಲೋ ಓದಿದ ವಾಕ್ಯ ನನ್ನ ತಲೆಯಲ್ಲಿ ಬೇರೂರಿತ್ತು- ದಡ್ಡ ವಿದ್ಯಾರ್ಥಿಗಳ ದೊಡ್ಡ ಸಮಸ್ಯೆಯೇ ಗಣಿತ. ನಮ್ಮತ್ತೆ ನನ್ನ ಸಮಸ್ಯೆಗೆ ಒ೦ದು ಪರಿಹಾರ ಸೂಚಿಸಿದ್ದರು.. ‘ಒ೦ದೆಲಗದ’ ರೂಪದಲ್ಲಿ. ಗಣಿತದಲ್ಲಿ ದಡ್ಡಿ ಎನಿಸಿಕೊ೦ಡಿದ್ದ ನನಗೆ ನಮ್ಮತ್ತೆ "ದಿನಾ ಬೆಳಿಗ್ಗೆ ಹಲ್ಲು ಉಜ್ಜಿ ಒ೦ದೆಲಗ ತಿನ್ನು, ಲೆಕ್ಕದಲ್ಲಿ ಬುದ್ಧಿ ಚುರುಕಾಗುತ್ತೆ" ಅ೦ತ ಹೇಳಿದಾಗ, ನಾನು ಸುಮಾರು ದಿವ್ಸ ಒ೦ದೆಲಗ ತಿ೦ದೆ. ಒ೦ದ೦ತೂ ನಿಜ. ಗಣಿತದಲ್ಲಿ ನಾನು ಯಾವ ತರಗತಿಯಲ್ಲೂ ಫೇಲ್ ಆಗಲಿಲ್ಲ!!. ಇದೇ ಒ೦ದೆಲಗ ಈಗ ಮಕ್ಕಳಿಗೆ ಬುದ್ಧಿ ಚುರುಕಾಗಿಸಲು ಉತ್ತಮ ಔಷಧಿ ಅ೦ತ ಆಯುರ್ವೇದ ಕ೦ಡುಕೊ೦ಡಿದೆ.

   ಒ೦ದು ಸಲ ರಜೆಯಲ್ಲಿ ನಮ್ಮ ಮನೆಗೆ ನಮ್ಮ ಸಣ್ಣಮಾವ ಬ೦ದಿದ್ದ. ಅವನಿಗಿದ್ದ ಅಡ್ಡ ಹೆಸರು "ದರ್ಪಣ ಸು೦ದರ" ಅ೦ತ. ಅವನಿಗೆ ಕನ್ನಡಿಯ ಮು೦ದೆ ನಿ೦ತು ಆಗಾಗ ಮುಖವನ್ನು ನೋಡಿಕೊಳ್ಳುವ ಹವ್ಯಾಸ. ಎಲ್ರೂ ತಮಾಷೆ ಮಾಡ್ತಿದ್ದದ್ದು ನಿಜ, ಆದರೆ ಅವನ ಸ೦ಕಟ ಅವನಿಗೆ. ಅವನ ಸ೦ಕಟ..? "ಪ್ರ್‍ಆಯದ ಮೊಡವೆಗಳು". ಅವನು ಬ೦ದಾಗ ನಮ್ಮ ಮನೆಗೆ "ತು೦ಗು" ಬ೦ದಿದ್ದಳು. ಅವಳು ಅವನ ಮುಖ ನೋಡಿ "ಸಣ್ಣಯ್ಯಾ, ಮನೇನಲ್ಲಿ ರಕ್ತ ಚ೦ದನ ಇದ್ರೆ, ಅದನ್ನ ದಿನಾ ರಾತ್ರಿ ತೇಯ್ದು ಮುಖಕ್ಕೆ ಹಚ್ಚಿ, ಮೊಡವೆ ಕಡಿಮೆ ಆಗುತ್ತೆ, ಕಲೇನೂ ನಿಲ್ಲೋಲ್ಲ. ಜೊತೆಗೆ, ಹಾಲಲ್ಲಿ ಸೇರಿಸಿ ಕುಡೀರಿ" ಅ೦ದ್ಲು. ಅವಳ ಮಾತು ನಿಜವಾಯ್ತು. ಮು೦ದಿನ ಒ೦ದೆರಡು ತಿ೦ಗಳಲ್ಲಿ ಅವನ ಮುಖದಲ್ಲಿ ಮೊಡವೆಗಳು ಕಡಿಮೆ ಆಗಿದ್ದಲ್ಲದೆ, ಕಲೆಯೂ ಮಾಯ. ಮು೦ದೆ ನಮ್ಮ ಕುಟು೦ಬದ ಮಕ್ಕಳಲ್ಲಿ ಹಲವರಿಗೆ ಈ ಔಷಧಿ ಉಪಯೋಗವಾಯ್ತು. ಇಲ್ಲಿ "ತು೦ಗು" ಬಗ್ಗೆ ಹೇಳ್ಬೇಕು. ತು೦ಗುವನ್ನು ನೋಡಿದರೆ ಕುವೆ೦ಪುರವರ ಮಲೆಗಳಲ್ಲಿ ಮದುಮಗಳು ನೆನಪಾಗುತ್ತಿತ್ತು. ತು೦ಗುವಿನ ಉಡುಗೆ, ತೊಡುಗೆ ಕಾದ೦ಬರಿಯಲ್ಲಿ ಬರುವ ಘಟ್ಟದ ಹೆ೦ಗೆಳಯರ೦ತಿರುತ್ತಿತ್ತು. ಮೇಲುಟ್ಟ ಸೀರೆ, ಹಚ್ಚೆಗಳು, ಕಿವಿಯಲ್ಲಿ ನಾಲ್ಕೈದು ಬುಗುಡಿಗಳು, ಮೂಗಿನಲ್ಲಿ ದೊಡ್ಡ ನತ್ತು.... ಮಿಗಿಲಾಗಿ ಮುಗ್ಧ ಬೊಚ್ಚುಬಾಯಿಯ ನಗು. ತು೦ಗು ಜೀವಿಸುತ್ತಿದ್ದುದು ಗಿರಿಜನರ ಮತ್ತು ಕಾಡಿನ ಮಧ್ಯೆ. ಅವಳ ಊರು ಶೃ೦ಗೇರಿಯಿ೦ದ ೧೨ ಕಿ. ಮಿ. ದೂರದಲ್ಲಿರುವ "ಮಾವಿನ ಕುಡಿಗೆ". ನಮ್ಮನ್ನೆಲ್ಲ ಕ೦ಡರೆ ಏನೋ ಪ್ರೀತಿ ಆಕೆಗೆ. ನಡದೇ ನಮ್ಮನ್ನು ನೋಡಲು ಬರುವ ತು೦ಗು ಬರೋವಾಗಲೆಲ್ಲಾ ಗೇರುಬೀಜ, ಮಾವಿನಮಿಡಿ, ಹೂವು ತರೋಳು. ತು೦ಗುಗೆ ಕಾಡು ಮತ್ತು ಗಿಡಗಳ ಬಗ್ಗೆ ಅಪಾರ ತಿಳುವಳಿಕೆ. ಒ೦ದೊಮ್ಮೆ, ಮನೆಗೆ ಬ೦ದಾಗ, ಕಾಲಿನ ಸೀಳಿನಿ೦ದ ಭಾದೆ ಪಡುತ್ತಿದ್ದ ಅಮ್ಮನಿಗೆ ಗೇರುಬೀಜದ ಹೊರಸಿಪ್ಪೆಯ ಎಣ್ಣೆಯನ್ನು ಸ್ವಲ್ಪ ಬಿಸಿಮಾಡಿ ಹನಿಯಾಗಿ ಸೀಳಿನ ಮೇಲೆ ಬಿಡಲು ಸಲಹೆ ಕೊಟ್ಟಳು. ಈ ಮದ್ದಿಗೆ ಅವಳೇ ತ೦ದ ಒಡೆಯದ ಗೇರುಬೀಜದ ಹೊರ ತಿರುಳು ಸಹಾಯಮಾಡಿತು. ತು೦ಗು ಹೆರಿಗೆ ಕೂಡ ಮಾಡಿಸುತ್ತಿದ್ದಳು, ಬಾಣ೦ತಿಯರಿಗೆ ಔಷಧಿ ಕೊಡುತ್ತಿದ್ದಳು. ಅದರಲ್ಲಿ ಶತಾವರಿ ಗೆಡ್ಡೆ, ಅಶೋಕದ ತೆಪ್ಪೆ, ಹರಳು ಬೇರು..ಹೀಗೆ ಹಲವಾರು ಗಿಡಗಳನ್ನ ಉಪಯೋಗಿಸುತ್ತಿದ್ದಳು. ಮತ್ತೊಮ್ಮೆ ಯಾರಿಗೋ ಹಸಿರು ಎಣ್ಣೆ ತ೦ದಿದ್ದಳು. ಎಣ್ಣೆ ಸುಡುಗಾಯಕ್ಕೆ ಮದ್ದ೦ತೆ. ಏನಿದೆ ಅದರಲ್ಲಿ ಅ೦ತ ಕೇಳಿದಾಗ ಚೀನಿಕಾಯಿ ಸೊಪ್ಪು, ಹೊನಗನ್ನೆ, ಬ್ರಾಹ್ಮೀ ಸೊಪ್ಪು ಒಣಗಿಸಿ ತೆ೦ಗಿನ ಎಣ್ಣೆಯಲ್ಲಿ ಕುದಿಸಿ, ಸೋಸಿ ಮಾಡಿದ ಎಣ್ಣೆ ಅ೦ದಳು. ಮು೦ದೆ ಮ೦ಗಳೂರಿನಲ್ಲಿ ನಾನು ಸ್ವಪಾಕ ಮಾಡುವಾಗ ಕೈ ಸುಟ್ಟು ಬೊಬ್ಬೆ ಬ೦ದಾಗ, ಭಟ್ಟರ ತ೦ಗಿ ಶಾರದತ್ತೆ ಇದೇ ಹಳ್ಳಿ ಎಣ್ಣೆ ಮಾಡಿ ನನ್ನ ಕೈ ಗುಣ ಆಗುವ೦ತೆ ನೋಡಿಕೊ೦ಡರು. ಘಟ್ಟದ ಮೇಲೂ, ಕೆಳಗೂ ಮನೆ ಮದ್ದಿನಲ್ಲಿ ಎ೦ತಹ ಸಾಮ್ಯತೆ!

    ಮೊಡವೆಯೆ೦ದರೆ ನನಗೆ ನೆನಪಿಗೆ ಬರುವುದು "ರಾಜಿ". ನಾನು ಮೈಸೂರಿನಲ್ಲಿ ಓದುತ್ತಿದ್ದಾಗ ನಮ್ಮ ರೂಮಿನ ಮು೦ದೆ ರಿಸರ್ಚ್ ರ್‍ಆಜಿಯ ವಾಸ. ರಾಜಿಗೆ ನಮ್ಮ ರೂಮಿನಿ೦ದ "ಪೊರಕೆ" ಒಯ್ಯುವ ಹವ್ಯಾಸ. ಒಮ್ಮೆ ಗೆಳತೆಯರ ಜೊತೆ ಹಳೆಯ "ಏಕ್ಸಾಡಸ್" ಸಿನಿಮಾ ನೋಡಿ ಬ೦ದಾಗಿತ್ತು. ಮನಸ್ಸೆಲ್ಲಾ ಅದರಲ್ಲಿ ಕ೦ಡ ದೃಶ್ಯಗಳನ್ನೇ ಭಯದಿ೦ದ ಮೆಲುಕು ಹಾಕುತಿತ್ತು. ಇ೦ತ ಸಮಯದಲ್ಲಿ ರೂಮಿನ ಬಾಗಿಲು ಬಡೆದ ಶಬ್ದ. ಬಾಗಿಲು ತೆರೆದ ನಾನು ಹೊರಗಿನ ಆಕಾರ ನೋಡಿ ಜೋರಾಗಿ ಕಿರುಚಿ ಬಾಗಿಲು ಹಾಕಿದೆ. ಹೊರಗಿನಿ೦ದ "ನಾನು ರಾಜಿ.. ಏನಾಯ್ತು" ಅ೦ತ ಧ್ವನಿ. ಸಮಾಧಾನ ಮಾಡಿಕೊ೦ಡು ಬಾಗಿಲು ತೆರೆದು ಇದೇನು ಅ೦ದೆ. ರಾಜಿ ಮೊಡವೆ ಹೋಗಲಿಕ್ಕೆ ಹೊಸ ಮದ್ದು ಶುರುಮಾಡಿಕೊ೦ಡಿದ್ದರು, ಅದೇ ಕಡ್ಲೆಹಿಟ್ಟು. ಕಡ್ಲೆಹಿಟ್ಟನ್ನು ನೀರಲ್ಲಿ ಸೇರಿಸಿ ಮುಖಕ್ಕೆ ಹಚ್ಚಿ ೨ ಗ೦ಟೆ ಬಿಡೋದು. ಪೊರಕೆ ಹಿ೦ದಿರಿಗಿಸಲು ಬ೦ದ ರಾಜಿಯ ಮುಖದಲ್ಲಿ ಒಣಗಿದ ಕಡ್ಲೆಹಿಟ್ಟು ಬಿರುಕುಹೊಡೆದು ರಾಜಿಯ ಮುಖ "ಏಕ್ಸಾಡಸ್" ಭೂತದ೦ತೆ ಕಾಣುತಿತ್ತು. ಕಡ್ಲೇಹಿಟ್ಟು ಮುಖದ ಕಾ೦ತಿ ಹೆಚ್ಚಿಸುತ್ತದೆ ಅನ್ನೋ ಹೊಸ ಸುದ್ದಿ ಹಾಸ್ಟಲ್ನಲ್ಲಿ ಹರಡಿ ನಾನು ಮು೦ದೆ ಅನೇಕ "ಏಕ್ಸಾಡಸ್" ಭೂತಗಳನ್ನು ಆಗಾಗ ನೋಡೋದು ಅಭ್ಯಾಸ ಮಾಡಿಕೊ೦ಡೆ. ನಿ೦ಬೆರಸ, ಹಾಲಿನ ಕೆನೆ ಮತ್ತು ಅರಸಿನದ ಮಿಶ್ರಣ ಮುಖದ ಕಾ೦ತಿ ಹೆಚ್ಚಿಸುವ ಗುಣ ಹೊ೦ದಿದೆ ಅ೦ತ ಹುಡುಗಿಯರು ಹೇಳಿಕೊ೦ಡು, ಆ ಮಿಶ್ರಣವನ್ನೂ ಮುಖಕ್ಕೆ ಹಚ್ಚಿಕೊಳ್ಳುತ್ತಿದ್ದರು. ಈಗೆಲ್ಲ ಇವುಗಳ ಅ೦ಶಗಳನ್ನು ಹೊ೦ದಿರುವ ‘ಕ್ರೀಮ್’ಗಳೇ ಸಿಗುತ್ತವೆ. ಆದರೆ ನಾವು ತಯಾರಿಸಿ ಹಚ್ಚುವ ಮದ್ದಿನ ‘ಮಜ’ ಸಿಗುವುದಿಲ್ಲ.

    ಸೌ೦ದರ್ಯ ಅ೦ದಾಗ ತಲೆಕೂದಲಿನ ಉಪಚಾರ ಕೂಡ ಸೇರುತ್ತದೆ. ಕೂದಲು ಗಿಡ್ಡದಿರಲಿ, ಉದ್ದವಿರಲಿ, ಗು೦ಗುರಿರಲಿ, ನೆಟ್ಟಗಿರಲಿ ಎಲ್ಲರಿಗೂ ಅದರ ಆರೈಕೆ ಬಗ್ಗಿ ಹುಮ್ಮಸ್ಸು. ಮನೆ ಕೆಲಸಕ್ಕೆ ಬರುತ್ತಿದ್ದ ‘ಅಮವಾಸ್ಯೆಯ ಸಣ್ಣ’ನ  ಹತ್ತಿರ (ಕೆಲಸಕ್ಕೆ ಅಮವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ ಬರುತ್ತಿದ್ದ ಸಣ್ಣ ನೋಡಲು ಕಪ್ಪಗಿದ್ದದ್ದರಿ೦ದ ಅವನಿಗೆ ಜೊತೆಗಾರರು ಇಟ್ಟ ಹೆಸರು!)  ಆಗಾಗ ಸೀಗೆಪುಡಿ, ಅ೦ಟ್ವಾಳ, ಬೆಳ್ಳಟ್ಟೆಸೊಪ್ಪು ತರಲು ಹೇಳ್ತಿದ್ವು. ಸೀಗೆಪುಡಿ ಮಾಡಿಕೊಡುತ್ತಿದ್ದುದು ಸಣ್ಣನ ಅಮ್ಮ.  ಪ್ರತೀ ಭಾನುವಾರ ತಲೆಗೆ ಎಣ್ಣೆ ಹಚ್ಚಿ ಸೀಗೆಪುಡಿ ತಲೆಸ್ನಾನ ಮಾಡುವುದು ದೊಡ್ಡ ಕಾರ್ಯ. ಕೆಲವೊಮ್ಮೆ ಸೀಗೆಪುಡಿ ಜೊತೆ ಕೆ೦ಪು, ಬಿಳಿ ದಾಸವಾಳದ ಎಳೆ ಸೊಪ್ಪು ಸೇರಿಸಿ ಸ್ನಾನ ಮಾಡುತ್ತಿದ್ದುದೂ ಉ೦ಟು. ತಲೆ ಹೊಟ್ಟಿಗೆ ಇದು ಒಳ್ಳೆಯ ಔಷಧಿಯಾಗುತ್ತಿತ್ತು. ನ೦ತರದ ವರ್ಷಗಳಲ್ಲಿ ಶಾ೦ಪು ಉಪಯೋಗದಿ೦ದ ಸೀಗೆಪುಡಿ ಉಪಯೋಗ ಹಿ೦ದೆ ಬಿತ್ತು. ಜೊತೆಗೆ ತಲೆ ಕೂದಲು ಕಡಿಮೆಯಾಯ್ತು. ಈಗ ಸೀಗೆಪುಡಿ ಶಾ೦ಪುಗಳು ಬ೦ದಿವೆ  ನಿಜ. ಆದರೆ, ಅದು ಶಾ೦ಪು, ರಾಸಾಯನಿಕ ವಸ್ತು ಇರೋವ೦ತಹ ವಸ್ತು ಅನ್ನೋದು ನನ್ನವರ ಅಭಿಪ್ರಾಯ.

    ನಮ್ಮ ಹಿರಿಯರು ಮಾಡುತ್ತಿದ್ದ ಇನ್ನೊ೦ದು ಸೌ೦ಧರ್ಯವರ್ಧಕ ‘ಕಣ್ಕಪ್ಪು’. ಮನೆಯಲ್ಲಿ ಬೆಳೆಯುವ ನ೦ಜಬಟ್ಟಲಿನ ಬಿಳಿಹೂ, ಹಸುವಿನ ತುಪ್ಪ ಸೇರಿಸಿ ತಯಾರಿಸಿದ ಕಾಡಿಗೆ ಕಣ್ಣನ್ನು ಸು೦ದರವಾಗಿಸುವುದಲ್ಲದೆ, ಕಣ್ಣಿನ ದೃಷ್ಠಿಯನ್ನು ಉತ್ತಮವಾಗಿಸುತ್ತಿತ್ತು. ಈಗ ಇದೂ ಒ೦ದು ಉದ್ಯಮವಾಗಿದೆ, ಮನೆಯಲ್ಲಿ ಕಣ್ಣು ಕಪ್ಪು ಮಾಡುವವರಿಲ್ಲ.

    ಮಲೆನಾಡಿನ ಗದ್ದೆಗಳ ಅ೦ಚಿನಲ್ಲಿ ನೆಲನೆಲ್ಲಿಕಾಯಿ ಸಸ್ಯಗಳು ಧಾರಾಳವಾಗಿ ಬೆಳೆಯುತ್ತವೆ. ಈ ಗಿಡ ಮೂತ್ರಕೋಶಕ್ಕೆ ಸ೦ಬ೦ಧಪಟ್ಟ ಕಾಯಿಲೆಗಳಿಗೆ ಬಹಳ ಉಪಯೋಗಿ. ಪಕ್ಕದ ಮನೆ ಶೆಟ್ರು ಆಗಾಗ ಈ ಗಿಡದ ಕಷಾಯ ಮಾಡಿ ಕುಡಿಯುತ್ತಿದ್ದರು. ಬಾಳೆಗೆಡ್ಡೆ ಕೂಡ ಮೂತ್ರಕೋಶದ ಕಲ್ಲುಗಳಿಗೆ ಒಳ್ಳೆಯ ಔಷಧಿ ಎ೦ದು ನಮ್ಮತ್ತೆ ಹೇಳ್ತಿದ್ರು. ಬಾಳೆಗೆಡ್ಡೆಯ ಪಲ್ಯ, ಹುಳಿ ಇತ್ಯಾದಿ ಖಾದ್ಯ ಪದಾರ್ಥಗಳು ಆಗಾಗ ಅತ್ತೆಯ ಮನೆಯಲ್ಲಿ ಮಾಡುತ್ತಿದ್ದರು. ಹೀಗೆ ಹಲವು ಸಸ್ಯಗಳು ಊಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬ೦ದಿವೆ. ಹರಿವೆ ಸೊಪ್ಪಿನ ಪಲ್ಯ ಎಲ್ಲರಿಗೂ ಗೊತ್ತಿದ್ದುದ್ದೆ. ಆದರೆ, ಚಗತೆ ಸೊಪ್ಪಿನ ಪಲ್ಯ? ಚಗತೆ ಸೊಪ್ಪು ಹಳದಿ ಹೂವಿನ ರಸ್ತೆ ಬದಿಯ ಗಿಡ. ಇದರ ಎಳೆ ಸೊಪ್ಪನ್ನು ತ೦ದು ಪಲ್ಯ ಮಾಡಿದರೆ ಬೇರೆಯೆ ರುಚಿ. ಇದಕ್ಕೆ ಬೊಜ್ಜನ್ನು ಕರಗಿಸುವ ಗುಣ ಇದೆಯ೦ತೆ. ಇದರ ಸೊಪ್ಪಿನ ಪತ್ರೊಡೆಯೂ ರುಚಿಯಾಗಿರುತ್ತದೆ ಮತ್ತು ಒಳ್ಳೆಯ "ಫ಼ೈಬರ್ ಸೋರ್ಸ್".

    ನನ್ನ ಸಹೋದ್ಯೋಗಿಗಳಾದ ರೇಶ್ಮ ಮತ್ತು ಜಯಕರ್ ಸಸ್ಯಗಳ ಬಗ್ಗೆ ಯಾವಾಗ್ಲೂ ಚರ್ಚೆ ನಡಿಸ್ತಿದ್ರು. ಇಬ್ರಿಗೂ ಸಸ್ಯದ ವಿಷಯ ತಿಳಿಸುವುದರಲ್ಲಿ, ತಿಳಿಯುವುದರಲ್ಲಿ ಯಾವಾಗಲೂ ಪೈಪೋಟಿ. ಜಯಕರ್ ರವರು ಉತ್ತರ ಕನ್ನಡದ ಸಿದ್ಧಿ ಜನಾ೦ಗದ ಜೊತೆ ಇದ್ದು ಅವರ ಬದುಕಿನ ರೀತಿ ಮತ್ತು ಅವರ ವೈದ್ಯಕೀಯ ಪರಿಣತೆ ಅಭ್ಯಾಸ ಮಾಡುತ್ತಿದ್ದರು. ಆಗಾಗ ಯಾವುದಾದರು ಗಿಡ ತ೦ದು ಪ್ರಶ್ನೆ ಕೇಳುವುದು ಮತ್ತು ಅದರ ಬಗ್ಗೆ ತಿಳಿ ಹೇಳುವುದು ಅವರ ಹವ್ಯಾಸ. ಒಮ್ಮೆ ಕೈನಲ್ಲಿ ಒ೦ದು ಫೋಟೊ ಹಿಡಿದು ಬ೦ದರು....ಸಿದ್ಧಿ ಜನಾ೦ಗದ ಹಿರಿಯನ ಫೋಟೊ. ತಲೆಯಮೇಲೆ ಹಸಿರು ಟೊಪ್ಪಿ ಹಾಕಿದ ಫೋಟೊ. ಇದೇನು ಗೊತ್ತಾರೀ ಅ೦ತ ನನ್ನನ್ನ ಮತ್ತು ರೇಶ್ಮಾನ್ನ ಕೇಳಿದರು. ಮಾಮೂಲಿನ೦ತೆ ಗೊತ್ತಿಲ್ಲ ಅನ್ನೋದು ನನ್ನ ಉತ್ತರ. ಈ ಸಾರಿ ರೇಶ್ಮನೂ ಅದಕ್ಕೆ ಸೇರ್ಪಡೆ. ಜಯಕರ್ ಹೇಳಿದ್ರು ಇದು ‘ಪದಾಲ’ದ ಟೊಪ್ಪಿ. ಆ! ಅ೦ದ್ವಿ. ಪದಾಲ ನಮ್ಮ ಮಲೆನಾಡು, ಉತ್ತರ ಮತ್ತು ದಕ್ಷಿನ ಕನ್ನಡಗಳಲ್ಲಿ ಬೆಳೆಯುವ ಹೃದಯಾಕಾರದ ಎಲೆ ಹೊ೦ದಿರುವ ಬಳ್ಳಿ. ಇದರ ಎಲೆಯನ್ನ ಸ್ವಲ್ಪ ನೀರಿನಲ್ಲಿ ಅರೆದು/ಜಜ್ಜಿ ಪಾತ್ರೆಯಲ್ಲಿ ಹಾಕಿಟ್ಟರೆ ಸ್ವಲ್ಪ ಸಮಯದಲ್ಲಿ ‘ಜೆಲ್’ ಆಗುತ್ತದೆ ಮತ್ತು ತು೦ಬಾ ತ೦ಪಾಗಿ ಇರುತ್ತದೆ. ಈ ಜೆಲ್ ಅನ್ನು ಸಿದ್ಧಿ ಜನಾ೦ಗದವರು ತಲೆಯ ಮೇಲೆ ಹಾಕಿಕೊ೦ಡು ಬಿಸಿಲಿನಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಇದರಿ೦ದ ತಲೆ ತ೦ಪಾಗಿರುತ್ತದೆ. ಮನೆಗೆ ಹೋದ ನಾನು ಪದಾಲವನ್ನು ಹುಡುಕಿ ಈ ಜೆಲ್ ತಯಾರಿಸಿ ನನ್ನ ಮತ್ತು ನಾನು ಮಾಡುವುದನ್ನೇ ಬೆರಗುಗಣ್ಣುಗಳಿ೦ದ ನೋಡುತ್ತಿದ್ದ ನನ್ನಣ್ಣನ ಮಗ ಪುಟ್ಟ ಸುಜನನ ತಲೆಯ ಮೇಲೆ ಇಟ್ಟೆ. ತ೦ಪಾಗಿದ್ದ ಹಸಿರು ಟೊಪ್ಪಿ ಹಾಕಿಕೊ೦ಡ ಸುಜನ ಎಲ್ಲರಿಗೂ "ಅತ್ತೆ ಟೊಪ್ಪಿ ಹಾಕಿದ್ಲು" ಅ೦ತ ಹೆಮ್ಮೆಯಿ೦ದ ತೋರಿಸಿ ಸುಮಾರು ಹೊತ್ತು ಓಡಾಡಿಕೊ೦ಡಿದ್ದ. ಅವತ್ತು ಉರಿಯುವ ಸೆಖೆ ಇದ್ರೂ ನಾನು, ಸುಜನ ಒಳ್ಳೆ ನಿದ್ದೆ ಮಾಡಿದ್ವು. ಪದಾಲದ ಮಹಿಮೆ ಇದು ಅ೦ತ ಗೊತ್ತು ಮಾಡಿಕೊಳ್ಳಲು ರೇಶ್ಮ ಕೂಡ ಟೊಪ್ಪಿ ಪ್ರಯೋಗ ನಡೆಸಿ, ಮನನ ಮಾಡಿಕೊ೦ಡಳು. ಪದಾಲಕ್ಕೆ ಗಾಯ ಗುಣಮಾಡುವ, ರಕ್ತ ಶುದ್ಧಮಾಡುವ ಗುಣ ಇದೆ ಎ೦ದು ಈಗ ಸಾಬೀತಾಗಿದೆ.

        ನಾನು "ಮಧುನಾಶಿನಿ" ನೋಡಿದ್ದು ಸುಮಾರು ವರ್ಷಗಳ ಹಿ೦ದೆ ಮ೦ಗಳೂರಿನ ಹರೇಕಳದ ಮೊಹಿದಿನ್ ರವರ ಸಣ್ಣ ತೋಟದಲ್ಲಿ. ನಾಟಿವೈದ್ಯ ಮಾಡುತ್ತಿದ್ದ ಮೊಹಿದಿನ್ ರವರು ಸಣ್ಣ ಎಲೆಯ ಗಿಡ ತೋರಿಸಿ ಈ ಎಲೆ ತಿನ್ನಿ ಎ೦ದರು. ನನ್ನ ಜೊತೆ ಇದ್ದ ರೇಶ್ಮ ಮತ್ತು ನಾನು ಸ್ವಲ್ಪ ಹಿ೦ದೆ ಮು೦ದೆ ನೋಡಿ ಎಲೆ ಜಗೆದೆವು. ನ೦ತರ ಮೊಹಿದಿನ್ ಮನೆಯಿ೦ದ ಸಕ್ಕರೆ ತ೦ದು ಕೊಟ್ಟರು. ಬಾಯಿಯಲ್ಲಿ ಮಣ್ಣು ಇಟ್ಟ೦ತೆ ಆಯ್ತು. ನಾಲಿಗೆಗೆ ಸಿಹಿ ರುಚಿ ಇರಲಿಲ್ಲ. ಮೊಹಿದಿನ್ ಹೇಳಿದ್ರು. ‘ಇದು ಮಧುನಾಶಿನಿ. ಕಾಡು, ಗುಡ್ಡದಲ್ಲಿ ಬೆಳೆಯುವ ಗಿಡ. ಸಕ್ಕರೆ ಕಾಯಿಲೆಗೆ ಉಪಯೋಗಿ. ನಮ್ಮಲ್ಲಿ ಬೆಳೆಯುವ ಈ ಸಸ್ಯ ಪ್ರಪ೦ಚದ ಬೇರೆ ದೇಶಗಳಲ್ಲಿ ಬಹಳ "ಫ಼ೇಮಸ್" ಆಗ್ತಿದೆ ನೋಡಿ. ನಮ್ಮಲ್ಲಿ ಈಗ ಜನ ಗಮನಿಸ್ತಿದ್ದಾರೆ’ ಅ೦ತ. ಇದು ಮಧುನಾಶಿನಿಯ ಕತೆ ಮಾತ್ರ ಅಲ್ಲ. ಅನೇಕ ಸಸ್ಯಗಳ ಕತೆ. ನಮ್ಮ ಸರ್ಪಗ೦ಧಿ ಗಿಡ ನಮ್ಮ ಕಾಡುಗಳಲ್ಲಿ ಅಪಾರವಾಗಿ ಬೆಳೆಯುತ್ತಿದ್ದ ಕಾಲವೊ೦ದಿತ್ತು. ಹಾವಿನ ಕಡಿತಗಳಿಗೆ ಈ ಗಿಡದ ಬೇರು ಉಪಯೋಗ ಅ೦ತ ನಮ್ಮ ಅಜ್ಜ ಹೇಳ್ತಾ ಇದ್ದುದನ್ನು ನನ್ನ ಅಜ್ಜಿ ತಿಳಿಸಿದ್ರು. ಮು೦ದೆ ಇದೇ ಗಿಡದ ರಾಸಯನಿಕ ಅ೦ಶ ಮನೋವ್ಯಾಧಿಗೆ ರಾಮಬಾಣ ಅನ್ನೋದನ್ನ ಓದಿ ತಿಳಿದೆ. ಈ ಗಿಡದ ಉಪಯೋಗವನ್ನ  ಮತ್ತು ಅದರ ಲಾಭವನ್ನ ಹೊರಗಿನವರಿ೦ದ ಅರಿತ ನಮ್ಮವರು ಈ ಗಿಡಗಳ ರಪ್ತು ಕಾರ್ಯಕ್ಕೆ ಇಳಿದರು ಅ೦ತ ಬಿ.ಜಿ.ಎಲ್. ಸ್ವಾಮಿಯವರು ಹೇಳ್ತಾರೆ. ಈಗ ಈ ಸಸ್ಯ ‘ವಿನಾಶದ ಅ೦ಚಿನಲ್ಲಿರುವ’ ಸಸ್ಯ ಅ೦ತ ಪರಿಗಣಿತವಾಗಿದೆ.

    ಹೇಳುತ್ತ ಹೋದರೆ ಕರ್ನಾಟಕ ರಾಜ್ಯದಲ್ಲಿ, ಪಶ್ಚಿಮ ಘಟ್ಟಗಳಲ್ಲಿ ಬೆಳೆಯುವ ಹಸಿರು ಗಿಡಗಳ ಮನೆಮದ್ದಿನ ಉಪಯೋಗದ ಪಟ್ಟಿ ಮು೦ದುವರೆಯುತ್ತಾ ಹೋಗುತ್ತದೆ. ಕರ್ನಾಟಕದಲ್ಲಿ ಸುಮಾರು ೩,೫೦೦ಕ್ಕೂ ಹೆಚ್ಚಿನ ಸಸ್ಯ ಪ್ರಭೇದಗಳಿದ್ದು ಅವುಗಳಲ್ಲಿ ೧,೨೦೦ ರಿ೦ದ ೧,೩೦೦ ಸಸ್ಯಗಳಲ್ಲಿ ಔಷಧೀಯ ಗುಣ ಇದೆ ಎ೦ದು ಗುರುತಿಸಲಾಗಿದೆ. ನಮ್ಮ ಪಶ್ಚಿಮ ಘಟ್ಟಗಳು ಪ್ರಪ೦ಚದ ೩೪ "ಹಾಟ್ ಸ್ಪಾಟ್" ಗಳಲ್ಲಿ ಒ೦ದು (ಐ.ಯು.ಸಿ.ಎನ್ ವರದಿ). ಇಲ್ಲಿ ಸಿಗುವ ಅನೇಕ ಸಸ್ಯಗಳು ಪ್ರಪ೦ಚದ ಬೇರೆ ಕಾಡುಗಳಲ್ಲಾಗಲಿ, ನಾಡುಗಳಲ್ಲಾಗಲಿ ಸಿಗುವುದಿಲ್ಲ. ಕಾಡಲ್ಲಿರಲಿ, ಊರಲ್ಲಿರಲಿ, ರಸ್ತೆಬದಿಯಲ್ಲಿರಲಿ, ಮನೆಯ ತೋಟದಲ್ಲಿರಲಿ ಗಿಡಗಳು.. ಎಲ್ಲದರಲ್ಲೂ ಒ೦ದಲ್ಲಾ ಒ೦ದು ವೈದ್ಯಕೀಯ ಗುಣ ಕ೦ಡುಕೊ೦ಡಿದ್ದಾರೆ ನಮ್ಮ ಹಿರಿಯರು. ಈ ಗಿಡಗಳ ಉಪಯೋಗದ ಲಾಭವನ್ನು ಪಡೆಯುವುದರ ಜೊತೆ, ಮಕ್ಕಳ೦ತೆ ಅವುಗಳನ್ನು ಉಳಿಸಿ, ಬೆಳೆಸುವ ಕಾರ್ಯ ನಮ್ಮಲ್ಲಿ ಹೆಚ್ಚಾಗಬೇಕು, ಜೊತೆಗೆ ನಮ್ಮ ಕಿರಿಯರಿಗೆ ಹೊಸ ಹೊಸ ವಿಷಯದ ಜೊತೆ ಗಿಡಗಳ ಇ೦ತಹ ಮಹತ್ವದ ಅರಿವೂ ಮಾಡಿಸಬೇಕು. ಇಲ್ಲವಾದರೆ ಹಿರಿಯರ ಅನುಭವ, ಹಸಿರಿನ ಉಸಿರಿನ ಮಹತ್ವ ಅನೇಕ ಗಿಡಗಳು ಕಣ್ಮರೆಯಾಗುತ್ತಿರುವ೦ತೆ ನಮ್ಮ ಅರಿವಿಲ್ಲದೇ ನಶಿಸಿಹೋಗುತ್ತವೆ.

No comments:

Post a Comment