Wednesday, June 5, 2013
೨೦೧೧ರ "ಅಕ್ಕ" ನೆನಪಿನ ಪುಸ್ತಕದಲ್ಲಿ ಪ್ರಕಟವಾದ ನನ್ನ ಲೇಖನ: ಮಳೆಯ ನೆನಪು
ಮಳೆಯ ನೆನಪು
ಅಪ್ಪ -ಅಮ್ಮನಿಗೆ ಫೊನ್ ಮಾಡಿದಾಗಲೆಲ್ಲ ನಾನು ಇಲ್ಲಿಯ ಛಳಿಯ ಹಾಗೂ ಸ್ನೋ ಬಗ್ಗೆ ವರದಿ ಒಪ್ಪಿಸುವುದು, ಅವರು ಊರಿನ ನಿಲ್ಲದ ಮಳೆಯ ಬಗ್ಗೆ ಪ್ರತಿವರದಿ ಒಪ್ಪಿಸುವುದು ನಡೆದೇ ಇದೆ. ಊರಿನ ಮಳೆ ಬಗ್ಗೆ ವರದಿ ಕೇಳುವಾಗಲೆಲ್ಲ ನನ್ನ ಮನಸ್ಸು ಇಲ್ಲಿಯ ಸ್ನೋ, ಛಳಿ ಮರೆತು ಮಲೆನಾಡಿನ ಮಳೆಯ ಮತ್ತು ಬಾಲ್ಯದ ನೆನಪು ಹೊತ್ತು ತರುತ್ತದೆ. ಆಗುಂಬೆ ಮಳೆಯ ಪರಿಚಯ ಎಲ್ಲರಿಗೂ ಇದ್ದದ್ದೆ. ಆಗುಂಬೆಯ ಸೂರ್ಯಾಸ್ತ ಮತ್ತು ಮಳೆ ವಿಶ್ವ ಪ್ರಸಿದ್ಧಿ. ಮಲೆನಾಡಿನ ಇತರ ಪ್ರಾಂತ್ಯಗಳಾದ ಶ್ರಿಂಗೇರಿ, ಕಳಸ, ತೀರ್ಥಹಳ್ಳಿ, ಕೊಟ್ಟಿಗೆಹಾರ, ಬಸರಿಕಟ್ಟೆ ಎಲ್ಲಾ ಕಡೆ ಹೆಚ್ಚು ಕಡಿಮೆ ಇದೇ ತರಹ ಮಳೆ ಬೀಳೋದು ಸಾಮಾನ್ಯ. ಸಂಜೆ ಗತ್ತಿನಲ್ಲಿ ಶುರುವಾದ ಮಳೆ ರಾತ್ರಿ ಧೋ ಅಂತ ಸುರಿದು ಬೆಳಿಗ್ಗೆ ಹಳುವಾಗಿ ಪುನ: ಚಿಟಿಪಿಟಿ ಸುರಿದು ಮತ್ತೆ ಧೋ ಮಳೆಯಾಗಿ ಮುಂದುವರೆಯುತ್ತದೆ. ಎಲ್ಲೋ ವಾರದೊಲ್ಲೊಂದು ದಿನ ಸೂರ್ಯನ ದರ್ಶನ ಆಗುತ್ತದೆ. ಮಲೆನಾಡಿನ ಕುದುರೆಮುಖ, ಕಳಸ, ಹೊರನಾಡು, ಜಯಪುರ, ಶ್ರಿಂಗೇರಿ, ತೀರ್ಥಹಳ್ಳಿ, ಕೊಪ್ಪ, ಬಾಳೆಹೊನ್ನೂರು, ಮೂಡಿಗೆರೆ .. ಎಲ್ಲಾ ಕಡೆಯೂ ಮಳೆ ಸುಂದರ ದೃಶ್ಯಾವಳಿಗಳನ್ನ ಸೃಷ್ಟಿಸುತ್ತದೆ. ಎಲ್ಲ ಕಡೆಯಲ್ಲೂ ಹಸಿರು ಭರ್ಜರಿಯಾಗಿ ಕಂಗೊಳಿಸುತ್ತದೆ.
ಮಲೆನಾಡಿನಲ್ಲಿ ಹುಟ್ಟಿ ಬೆಳೆದ ನನ್ನಂತವರಿಗೆ ಮಳೆ ಬೇಸರ ತರಿಸುವುದಿಲ್ಲ. ಮಳೆಯ ಸದ್ದು ಹಲವಾರು ನೆನಪುಗಳನ್ನ ಹೊತ್ತು ತರುತ್ತದೆ. ವರ್ಷದ ೬ ತಿಂಗಳು ಸುರಿವ ಮಳೆ, ಗುಡುಗು, ಸಿಡಿಲು, ಗಾಳಿ ಮತ್ತೆ ಧಾರಾಕಾರವಾಗಿ ಸುರಿವ ಮಳೆ ನಾವುಗಳು ಬೆಳೆಯುವಾಗ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ಕೆಲವು ವರ್ಷಗಳಿಂದ ಊರಿನಲ್ಲಿ ಮಳೆ ಕಡಿಮೆ, ತುಂಗೆ ಬತ್ತಿದ್ದಾಳೆ ಅನ್ನೋ ಸುದ್ದಿ ಕೇಳಿದಾಗಲೆಲ್ಲ ಮನಸ್ಸಿನಲ್ಲಿ ದುಃಖದ ಛಾಯೆ ಆವರಿಸುತ್ತಿತ್ತು. ಕಳೆದಬಾರಿ ಊರಿಗೆ ಹೋದಾಗ ಸಂತಸದ ಸುದ್ದಿ ಎಂದರೆ ತುಂಬಿ ಹರಿಯುತ್ತಿದ್ದ ತುಂಗೆ ಮತ್ತು ನಿಲ್ಲದ ಮಳೆಯ ಬಗ್ಗೆ ವರದಿ. ನನ್ನಣ್ಣ ಶ್ರಿಂಗೇರಿ ತುಂಗೆಯಿಂದ ಆವರಿಸಿ ದ್ವೀಪವಾಗಿದ್ದ ಫೋಟೊ ತೋರಿಸಿದಾಗ ಮನಸ್ಸು ಸಂತಸದಿಂದ ಬೀಗಿತ್ತು.
ರಭಸವಾಗಿ ಹರಿವ ತುಂಗೆಯನ್ನು ನೋಡಲು ಶ್ರಿಂಗೇರಿ ಶ್ರೀಮಠದ ಸೇತುವೆ ಒಂದು ಪ್ರಶಸ್ತ ಜಾಗ. ಮಠದ ಸೇತುವೆ ಮೇಲೆನಿಂತು ತುಂಗಾಪ್ರವಾಹವನ್ನು ನೋಡುವುದೆ ಹಬ್ಬ. ಕೆಂಬಣ್ಣದ ನೀರಿನಲ್ಲಿ ತೇಲಿ ಬರುತ್ತಿದ್ದ ದೊಡ್ಡಮರದ ದಿಣ್ಣೆಗಳು, ಬಾಳೆಗಿಡಗಳು, ಬಿಳಿಯ ನೊರೆ..ಇವೆಲ್ಲಾ ಪ್ರತಿವರುಷವೂ ತಪ್ಪದೆ ವೀಕ್ಷಿಸುತ್ತಿದ್ದೆವು. ಈಗಿನ ಕಾಂಕ್ರೀಟ್ ಸೇತುವೆ ಬರುವ ಮೊದಲು ತುಂಗೆಯನ್ನು ದಾಟಲು ಒಂದು ದಡದಿಂದ ಇನ್ನೊಂದು ದಡಕ್ಕೆ ಮರದ ಹಲಿಗೆಗಳ ಸಾರ ಹಾಕುತ್ತಿದ್ದರು. ಮಳೆಗಾಲದಲ್ಲಿ ಸಾರ ತೆಗೆದುಬಿಡುತ್ತಿದ್ದರು. ಉಕ್ಕೇರುತ್ತಿದ್ದ ತುಂಗಾ ಪ್ರವಾಹದ ಮುಂದೆ ಸಾರ ನಿಲ್ಲುತ್ತಿರಲ್ಲಿಲ್ಲ. ಕಾಂಕ್ರೀಟ್ ಸೇತುವೆ ಬಂದ ಮೇಲೆ ಕೆಳಗೆ ತುಂಬಿ ಹರಿಯುವ ನದಿ ನೋಡುತ್ತಾ ಸೇತುವೆ ಮೇಲೆ ನಡೆಯುವುದು ಒಂದು ಮರೆಯದ ಅನುಭವ. ತುಂಗೆಯಲ್ಲಿ ಅಪರೂಪದ ಮೀನುಗಳಿವೆ. ಸಣ್ಣವಳಿದ್ದಾಗ ನನಗೆ ಆಶ್ಚರ್ಯ ಅಂದರೆ ದೊಡ್ಡ ಮೀನುಗಳೆಲ್ಲ ಮಳೆಯಲ್ಲಿ ಎಲ್ಲಿ ಹೋಗುತ್ತವೆ ಅಂತ. ಏಕೆಂದರೆ ಮಳೆ ಮುಗಿದ ಮೇಲೆ ಮೀನುಗಳೆಲ್ಲ ವಾಪಾಸ್ಸು ಕಾಣಿಸುತ್ತಿದ್ದವು.
ಶ್ರಿಂಗೇರಿಯಲ್ಲಿ ಮಳೆಬಂದರೂ ಕೆಲವೊಮ್ಮೆ ಛತ್ರಿಯ ಅವಶ್ಯಕತೆ ಇರುತ್ತಿರಲಿಲ್ಲ. ಮಂಗಳೂರು ಹಂಚಿನ ಮನೆಗಳು, ಬೀದಿಯವರೆಗೂ ಚಾಚಿರುತ್ತಿದ್ದ ಜಗುಲಿ, ಒಂದಕ್ಕೊಂದು ಅಂಟುಕೊಂಡೆ ಕಟ್ಟಿದಮನೆಗಳು ಸರ್ವೇಸಾಮಾನ್ಯ. ನಾವು ಮಕ್ಕಳು ಜಗುಲಿಯಿಂದ ಜಗುಲಿಗೆ ಹಾರಿ ಮಳೆಯಲ್ಲಿ ಒದ್ದೆಯಾಗದಂತೆ ಸ್ಕೂಲಿಗೆ ತಲುಪಿ, ಮನೆಗೆ ಬರುವಾಗಲೂ ಇದೇ ರೀತಿ ಜಿಗಿದು, ಹಾರಿ ಮನೆ ತಲುಪುತ್ತಿದ್ದೆವು. ಛತ್ರಿ ಆಟಕ್ಕೆ ಮಾತ್ರ. ಅಂದರೆ ಗುನ್ನ ಹಾಕುವುದಕ್ಕೆ. ಒಬ್ಬರ ಛತ್ರಿಯಿಂದ ಇನ್ನೊಬ್ಬರ ಛತ್ರಿಗೆ ಹೊಡೆದು ತೂತು ಮಾಡುವುದು ಗುನ್ನಾಟ. ಹಿರಿಯರಿಂದ ಈ ಗುನ್ನಗಳಿಗೆ ಬೈಗುಳ ಸುರಿಯುತ್ತಿತ್ತು.
ನಮ್ಮ ತಂದೆಯವರು ಶ್ರಿಂಗೇರಿಯಿಂದ ಹೊರಗೆ ೨ ಮೈಲು ದೂರದಲ್ಲಿ ಮನೆಕಟ್ಟಿದಾಗ ನಮಗೆ ಛತ್ರಿಯ ಅವಶ್ಯಕತೆ ಜಾಸ್ತಿಯಾಯ್ತು. ಶ್ರಿಂಗೇರಿ ಶ್ರೀಮಠದ ಸ್ಕೂಲಿನಲ್ಲಿ ಕಲಿಯುತ್ತಿದ್ದ ನಾವುಗಳು ತುಂಗಾ ಪ್ರವಾಹದ ಆನಂದ ಅನುಭವಿಸುತ್ತಿದ್ದೆವು. ಮಧ್ಯಾಹ್ನದ ಬಿಡುವಿನ ವೇಳೆ ಪ್ರವಾಹ ನೋಡಲು ಊಟ ಬಿಟ್ಟು ಓಡುತ್ತಿದ್ದೆವು. ಒಮ್ಮೆ ಅತಿವೃಷ್ಟಿಯಿಂದಾಗಿ ಶ್ರಿಂಗೇರಿ ಸುತ್ತಮುತ್ತಲೆಲ್ಲ ನೀರೋ ನೀರು. ತುಂಗೆ ಮೇಲೇರುತ್ತಿದ್ದಳು. ಸ್ಕೂಲಿಗೆ ಬಂದ ಸ್ವಲ್ಪ ಹೊತ್ತಿನಲ್ಲೇ ರಜೆ ಘೋಷಣೆಯಾಯ್ತು. ನಾವು ನಾಲ್ಕು ಜನ ಗೆಳತಿಯರು ಸುರಿವ ಮಳೆ ಮತ್ತು ಅತಿ ಜೋರಾಗಿ ಬೀಸುವ ಗಾಳಿಯಲ್ಲಿ ಸೊಂಟದವರೆಗಿನ ನೀರಿನಲ್ಲಿ ಹೇಗೋ ಹರಸಾಹಸ ಮಾಡಿ ದಾಟುತ್ತಿದ್ದೆವು. ತುಂಬಾ ಸಣ್ಣಗಿದ್ದ ನನ್ನ ಗೆಳತಿಯೊಬ್ಬಳನ್ನು ಜೋರಾಗಿ ಬೀಸುವ ಗಾಳಿ ಛತ್ರಿ ಸಮೇತ ನೀರಿನಿಂದ ಮೇಲೆ ನಿಜವಾಗಿಯೂ ಹಾರಿಸಿತು. ಗಾಬರಿಯಿಂದ ಉಳಿದ ಮೂವರು ಅವಳನ್ನು ಹೇಗೋ ಹಿಡಿದು ಮನೆ ತಲುಪುವಾಗ ಹೃದಯ ಢವಗುಟ್ಟುತ್ತಿತ್ತು. ಹಿರಿಯರಿಗೆ ಈ ವಿಷಯ ಹೇಳುವ ಧೈರ್ಯ ಒಬ್ಬರಿಗೂ ಇರಲಿಲ್ಲ. ಹಿರಿಯರಿಗೆ ಈ ವಿಷಯ ಗೊತ್ತಾದದ್ದು ಮಳೆಗಾಲ ಮುಗಿದಮೇಲೇನೆ. ಮಳೆಗಾಲದಲ್ಲಿ ಬೆಳಿಗ್ಗೆ ಸ್ಕೂಲಿಗೆ ಬಳಸು ದಾರಿಯಲ್ಲಿ ನಡೇದೇಹೋಗಬೇಕಿತ್ತು. ಈಗಿನಂತೆ ಸಮಯಕ್ಕೆ ಸರಿಯಾಗಿ ವಾಹನಗಳ ಸೌಕರ್ಯ ಇರುತ್ತಿರಲಿಲ್ಲ. ಹತ್ತಿರದ ದಾರಿಯಲ್ಲಿ ಎಕ್ಕನಹಳ್ಳ ಮಳೆಯಲ್ಲಿ ತುಂಗಾ ಪ್ರವಾಹದ ಜೊತೆ ಸೇರಿ ಮೇಲೇರುತಿತ್ತು. ಮನೆಯವರೆಗೂ ನೀರು ಉಕ್ಕೇರಿ ಬರುತ್ತಿತ್ತು. ಬಳಸು ದಾರಿ ಹಿಡಿದು ಸ್ಕೂಲು ತಲುಪುವಾಗ ಬಟ್ಟೆಯೆಲ್ಲ ಒದ್ದೆಮುದ್ದೆ, ಮದ್ಯಾಹ್ನದ ಊಟ ಥಂಡಿ. ಇದರ ಜೊತೆಯಲ್ಲಿ ಹೋಮ್ ವರ್ಕ್ ಪುಸ್ತಕಗಳಲ್ಲಿ ನೀರು ಸೇರಿರುತ್ತಿತ್ತು.
ಪ್ರತಿವರ್ಷ ಸ್ವಾತಂತ್ರ್ಯ ದಿನೋತ್ಸವದ ದಿನ ಬೆಳಿಗ್ಗೆ ೮ ಗಂಟೆಗೆ ಸ್ಕೂಲಿನಲ್ಲಿ ಧ್ವಜಾರೋಹಣ ಕಾರ್ಯಕ್ರಮಕ್ಕೆ ಹಾಜರಿರಬೇಕಿತ್ತು. ನಂತರ ಶ್ರಿಂಗೇರಿಯ ಮುಖ್ಯ ಧ್ವಜಾರೋಹಣದ ಕಾರ್ಯಕ್ರಮಕ್ಕೆ ಬೀದಿಗಳಲ್ಲಿ ಎಲ್ಲ ಸ್ಕೂಲಿನ ಮಕ್ಕಳೂ ಮೆರವಣಿಗೆಯಲ್ಲಿ ನಡೆದು ಮೈದಾನದಲ್ಲಿ ಸೇರುವುದು ವಾಡಿಕೆ. ನಾವು ಸ್ಕೂಲಿನಿಂದ ಹೊರಡುವವರೆಗೂ ತೆಪ್ಪಗಿರುತ್ತಿದ್ದ ಮಳೆ ಮೆರವಣಿಗೆಯಲ್ಲಿ ಹೊರಡುವಾಗ ಚಿಟಿಪಿಟಿ ಶುರುವಾಗುತ್ತಿತ್ತು. ಛತ್ರಿ ಬಿಡಿಸಿದರೆ ಸ್ಕೂಲಿನ ಲೀಡರುಗಳ ಹಾರಾಟ..ಛತ್ರಿ ಮಡಿಸಿ ಅಂತ. ಹುರುಪಿನಿಂದ ಮೆರವಣಿಗೆಯಲ್ಲಿ ಘೋಷಣೆಗಳು ಕೂಗುತ್ತಾ ಸಾಗುತ್ತಿದ್ದೆವು.....ಜೈಜವಾನ್-ಜೈಕಿಸಾನ್, ಏನೇಬರಲಿ-ಒಗ್ಗಟ್ಟಿರಲಿ, ಶಾಂತಿ-ಶಿಸ್ತು.. ಆ ವರ್ಷ ಒಂದೇ ಸಮ ಸುರಿಯುತ್ತಿದ್ದ ಮಳೆಯಿಂದ ವಿದ್ಯಾರ್ಥಿನಿಯರು ಬೇಸತ್ತಿದ್ದರು, ಜೊತೆಗೆ ನಿಧಾನವಾಗಿ ಮೆರವಣಿಗೆ ಸಾಗುತ್ತಿತ್ತು. ಸ್ಕೂಲ್ ಲೀಡರುಗಳ ಆರ್ಭಟದಿಂದಲೂ ಬೇಸತ್ತಿದ್ದರು. ಸರಿ, ಘೋಷಣೆಗಳು ಕೂಗುವಾಗ ಯರೋ ತುಂಟಿಯೊಬ್ಬಳು ಘೊಷಣೆಯನ್ನೇ ಬದಲಾಯಿಸಿದಳು.. ಜೈಜವಾನ್..ಜಾನಕಿ ಸನ್!, ಏನೇಬರಲಿ- ಒಬ್ಬಟ್ಟಿರಲಿ !. ಅಲ್ಲೇ ಇದ್ದ ನಾಯಕಿಮಣಿ ಕಣ್ಬಿಟ್ಟಳು..ಯಾರೇ ಅದು? ಅಂತ. ಯಾರೂ ಉತ್ತರಕೊಡದೆ ನಗುತ್ತಿದ್ದೆವು. ನಾಯಕಿಮಣಿ ಇನ್ನೊಂದು ದಿಕ್ಕಿಗೆ ತಿರುಗಿದಾಗ, ಮತ್ತೊಂದು ಘೋಷಣೆಯಯ್ತು. ಶಾಂತಿ..ಸುಸ್ತು! ಆ ನಾಯಕಿ ಪುನಃ ತಿರುಗಿದಳು..ಕಣ್ಬಿಟ್ಟಳು.. ಅವಳ ಹೆಸರೂ ಶಾಂತಿ.. ಮುಖ ಕೆಂಪಾದ ಆಕೆ ಇನ್ನೊಂದು ದಿಕ್ಕಿಗೆ ತಿರುಗಿದಾಗ..ಪುನಃ ಯಾರೋ ಶಾಂತಿ ಎಂದರು.. ಪ್ರತಿಘೋಷಣೆ ಈ ಬಾರಿ..ಛತ್ರಿ !!. ಮತ್ತಷ್ಟು ಕೆಂಪಾದ ನಾಯಕಿ ನಾವಿದ್ದ ಕಡೆ ಮೆರವಣಿಗೆ ಮುಗಿಯುವವರೆಗೂ ಬರಲೇ ಇಲ್ಲ!!
ಇಂಥ ಮಳೆಯಲ್ಲೊಮ್ಮೆ ನಮ್ಮ ಸಂಬಂಧಿ ವೃದ್ಧೆ ಅಚ್ಚಮ್ಮ ತುಂಬಿ ಹರಿಯುತ್ತಿದ್ದ ಚರಂಡಿಯಲ್ಲಿ ಬಿದ್ದರು. ಅವರನ್ನು ಎತ್ತಲು ಹೋದ ಮಲ್ಲಪ್ಪ ಹೆಗ್ಗಡೆಯವರಿಗೆ ‘ಅಯ್ಯೊ, ನನ್ನನ್ನ ಮುಟ್ಟಬೇಡವೋ, ಮಡಿ ಹಾಳಾಗುತ್ತೆ’ ಅಂಥ ಗೋಳಿಟ್ಟರಂತೆ. ಅಮ್ಮ ಇಲ್ಲಿಂದ ನಿಮ್ಮನ್ನ ಮೇಲೆತ್ತದಿದ್ದರೆ ಕೊಚ್ಚಿಹೋಗ್ತೀರ ಅಂತ ಪುಸಲಾಯಿಸಿ ಅವರನ್ನ ಮೇಲೆತ್ತುವ ಹೊತ್ತಿಗೆ ಸಾಕೋ ಸಾಕು ಅಂತ ನಡೆದ ಕತೆಯನ್ನ ನನ್ನ ತಂದೆಯವರ ಮುಂದೆ ಮಲ್ಲಪ್ಪನವರು ಹೇಳಿದರಂತೆ. ಇದನ್ನ ಕೇಳಿ ನಮಗೆಲ್ಲ ನಗುವೋನಗು. ಚರಂಡಿಯಲ್ಲಿ ಬಿದ್ದವರಿಗೆ ಎಲ್ಲಿಂದ ಮಡಿ?. ಇಂಥದೇ ಇನ್ನೊಂದು ಘಟನೆ: ನಾನೇ ಕಣ್ಣಾರೆ ನೋಡಿ ಕಿವಿಯಾರೆ ಕೇಳಿದ್ದು. ಹಿರಿಯರೊಬ್ಬರು ಮಠದಲ್ಲಿ ಪೂಜೆ ಮುಗಿಸಿ ಹೊರಬರುತ್ತಿದ್ದರು. ಈ ಹಿರಿಯರು ವಾಲೆಕೊಡೆಗೆ (ಕತ್ತಾಳೆ ಗಿಡದ ಎಲೆ ಅಥವ ತಾಟೆನುಂಗು ಎಲೆಯ ಛತ್ರಿ)ಗೆ ಪ್ರಸಿದ್ಧರು. ಅಪರೂಪಕ್ಕೆ ಅವತ್ತು ಸೂರ್ಯ ಹೊರಬಂದಿದ್ದ. ಇವರು ನಡೆವ ದಾರಿಯಲ್ಲಿ ಕಾವಲುಗಾರನ ನೆರಳು ಬಿದ್ದಿತ್ತು. ಹಿರಿಯರಿಗೆ ಕೋಪ ಬಂತು. ಹಿರಿಯರು: ದೂರ ಸರಿಯೋ, ನಿನ್ನ ನೆರಳು ನನ್ನ ಛತ್ರಿ ಮೇಲೆ ಬೀಳುತ್ತೆ. ಕಾವಲುಗಾರ: ಅದರಿಂದೇನಾಯ್ತು ಸ್ವಾಮಿ? ಹಿರಿಯರು: ತಲೆಹರಟೆ, ನನ್ನ ಮಡಿ ಹಾಳಾಗುತ್ತೆ. ಕಾವಲುಗಾರ: ಪೂಜೆ ಆಯ್ತಲ್ಲ ಸ್ವಾಮಿ. ಹಿರಿಯರು: ದೂರ ಸರಿಯೋ, ಪೇಶ್ಗಾರಿಗೆ ಹೇಳ್ತೀನಿ ನೋಡು. ಕಾವಲುಗಾರ ಹೆದರಿ ದಾರಿ ಬಿಟ್ಟ. ಕೆಲವು ದಿನಗಳ ನಂತರ ಅದೇ ಕಾವಲುಗಾರ ಅದೇ ಹಿರಿಯರ ವಾಲೆಕೊಡೆ ಹಿಡಿದು ಅವರ ಹಿಂದೆ ಹೆಜ್ಜೆ ಹಾಕುತ್ತಿದ್ದ. ಇವತ್ತು ಇವರ ಮಡಿ ಎಲ್ಲಿ ಹೋಯ್ತು ಅಂಥ ನಂಗೆ ಆಶ್ಚರ್ಯ.
ಮಳೆಗೂ ಕತೆಪುಸ್ತಕಗಳಿಗೂ ನಂಟು, ಮಧುರ ನಂಟು. ಧೋ ಎಂದು ಮಳೆ ಸುರಿಯುವಾಗ ಹಲಸಿನ ಹಪ್ಪಳ, ಬಾಳೆಯ ಉಪ್ಪೇರಿ ಬಿಸಿಕಾಫಿ ಮತ್ತು ನೆಚ್ಚಿನ ಪುಸ್ತಕ ಹಿಡಿದು ಬೆಚ್ಚಗೆ ಕುಳಿತರೆ ಮಳೆ ಎಷ್ಟು ಬಂದರೂ ಸಂತಸವೆ. ಮಳೆ ಕತೆಪುಸ್ತಕಗಳ ದಾಹ ಹೆಚ್ಚಿಸುತ್ತಿತ್ತು. ಇಂಥ ಮಳೆಗಾಲದಲ್ಲೆ ನಾನು ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು", ಬಿ.ಜಿ. ಎಲ್. ಸ್ವಾಮಿಯವರ ‘ಹಸುರು ಹೊನ್ನು" ಎಂ.ಕೆ. ಇಂದಿರಾರವರ ‘ಗುಂಡ’, ‘ಡಾಕ್ಟರ್’, ‘ಟು-ಲೆಟ್’, ಬಾಣಾಸುರನ ‘ಕಾದಂಬರಿ’, ಎಸ್. ಎಲ್. ಭೈರಪ್ಪನವರ ‘ಪರ್ವ’ ಒದಿದ್ದು. ಸುಧಾ, ತರಂಗ, ಇಂದ್ರಜಾಲ ಕಾಮಿಕ್ಸ್ ಗಳಿಗಾಗಿ ನಾವು ಅಣ್ಣ-ತಂಗಿಯರು ಪೈಪೋಟಿ ನಡೆಸುತ್ತಿದ್ದೆವು.
ಮಳೆಗಾಲದಲ್ಲಿ ಮಲೆನಾಡಿನಲ್ಲಿ ತರಕಾರಿಗಳ ಅವಶ್ಯಕತೆ ಕಡಿಮೆ. ತೋಟದಲ್ಲಿ ಸೊಂಪಾಗಿ ಬೆಳೆಯುವ ಕಾಡುಹರಿವೆ, ಸುರಿಗೆಕುಡಿ, ಹಲಸು, ಕಾಕಿಸೊಪ್ಪು, ದಾಸವಾಳದ ಸೊಪ್ಪು, ಎಳೆಬಿದಿರು (ಕಳಲೆ) ಎಲ್ಲಾ ನಮ್ಮ ಅಡಿಗೆ ಮನೆಯಲ್ಲಿ ರುಚಿಯಾದ ಅಡುಗೆಯಾಗುತ್ತಿದ್ದವು. ಅದರಲ್ಲೂ ಹಲಸಿನ ತಿಂಡಿಗಳ ಮತ್ತು ಅಡಿಗೆಗಳ ಮಂಡಿಗೆ: ಹಲಸಿನ ಕಾಯಿಯ ಪಲ್ಯ, ಸಾಂಬಾರು, ಹಲಸಿನ ಹಪ್ಪಳ, ಉಪ್ಪೇರಿ, ಹಲಸಿನ ಹಣ್ಣಿನ ಕಡಬು, ಕರಿದ ಸಿಹಿತಿಂಡಿ (ಮೂಳಕ), ದೋಸೆ.. ಜೊತೆಗೆ ಎಳೆಬಿದಿರಿನ ಪಲ್ಯ, ಉಪ್ಪಿನಕಾಯಿ, ಸಾಂಬಾರು, ಕೆಸುವಿನ ಎಲೆಯ.. ಪತ್ರೊಡೆ, ಪಲ್ಯ, ಸಾಂಬಾರು, ಕರ್ಲಿ....
ಎಳೆಬಿದಿರು ತರಲು ಮಳೆಗಾಲದ ಆರಂಭದಲ್ಲಿ ಕೆಲಸದ ಪರಬುವಿಗೆ ಹೇಳಿದರೆ ಅವನು ಎಲೆ-ಅಡಿಕೆ ಜಗೆಯುತ್ತಾ ‘ಕಂಡೀಶನ್’ ಹಾಕೇತರುತ್ತಿದ್ದ.."ಕಳಲೆ ಉಪ್ಪಿನಕಾಯಿ, ಸಾಂಬಾರು ನಂಗೂ ಬೇಕಮ್ಮ" ಅಂತ. ಸಂಜೆ ಕೆಲಸದವರು ಹಲಸಿನಹಣ್ಣು ಬಿಡಿಸಿ ನಮಗೆ ಕೊಟ್ಟು ತಾವು ಮನೆಗಳಿಗೆ ತಮ್ಮ ಪಾಲು ತೆಗೆದುಕೊಂಡು ಹೋಗುವುದು ವಾಡಿಕೆ. ಶೇಖರಿಸಿಟ್ಟ ಹಲಸಿನ ಬೀಜ ಬೇಸಿಗೆಯಲ್ಲಿ ಸಾಂಬಾರಿಗೆ ಬರುತ್ತಿತ್ತು. ನಾಯಿಗಳಂತೂ ಹಲಸಿನ ಹಣ್ಣನ್ನು ಆಸೆಯಿಂದ ಕಣ್ಣು ಬಿಟ್ಟು, ಜೊಲ್ಲು ಸುರಿಸುತ್ತ ನೋಡುತ್ತಿದ್ದವು. ಒಳಗಿನಿಂದ ಅಜ್ಜಿಯ ಧ್ವನಿ ಕೇಳಿಸುತ್ತಿತ್ತು ‘ನಾಯಿಗೆ ಹಣ್ಣು ಹಾಕಬೇಡಿ, ಹೊಟ್ಟೆ ಹಾಳಾಗಿ ಗಲೀಜು ಮಾಡುತ್ತ್ವೆ.’ ನಮಗೆ ಸುರಿವ ಮಳೆಯಲ್ಲಿ ತೋಟ ಕಾಯುವ ನಾಯಿಗಳ ಬಗ್ಗೆ ಕನಿಕರ.
ಮಳೆಗಾಲ ಮುಗಿಯುವವರೆಗೂ ಅಡಿಕೆ ಮತ್ತು ಕಾಫಿ ತೋಟಕ್ಕೆ ಹೋಗುವುದೆಂದರೆ ನಮಗೆ ಅಲರ್ಜಿ. ಕಾಫಿತೋಟದಲ್ಲಿ ಕಾಲಿಟ್ಟರೆ ಇಂಬಳಗಳ ಕಾಟ. ಇಂಬಳ ಅಂದರೆ ಸಣ್ಣಗಾತ್ರದ ಕಪ್ಪು ಬಣ್ಣದ ‘ಲೀಚ್’. ಈ ಇಂಬಳಗಳು ಸದ್ದಿಲ್ಲದೆ ಕಾಲು ಹತ್ತಿ ರಕ್ತ ಕುಡಿದು ದಪ್ಪವಾಗಿ ಕೆಳಗೆ ಬೀಳುತ್ತವೆ. ಅವು ಕಚ್ಚಿದ ಜಾಗದಲ್ಲಿ ರಕ್ತ ಸುರಿದ ಮೇಲೇನೇ ನಮಗೆ ‘ಓ ಇಲ್ಲಿ ಇಂಬಳ ಕಚ್ಚಿದೆ’ ಅನ್ನೋ ಅರಿವು ಮೂಡುತ್ತದೆ. ಅಕಾಸ್ಮಾತ್ತಾಗಿ ನೋಡಿ, ಬಲವಂತವಾಗಿ ಎಳೆದರೆ ‘ಎಲಾಸ್ಟಿಕ್ ಪ್ರಾಪರ್ಟಿ’ ಹೊಂದಿರುವ ಈ ಪ್ರಾಣಿಗಳು ಉದ್ದವಾಗುತ್ತವೇ ಹೊರತು ಚರ್ಮ ಬಿಟ್ಟು ಪಕ್ಕನೆ ಬರುವುದಿಲ್ಲ. ಪಾಪದ ನಾಯಿಗಳಿಗೂ ಈಪಾಡು ತಪ್ಪದು. ಹಲಸಿನ ಹಣ್ಣು ತಿನ್ನಲೋ, ತೋಟಕಾಯಲೋ, ದನ ಓಡಿಸಲೋ ಹೋದ ನಾಯಿಗಳ ಕಾಲು ಮತ್ತು ಮೂಗಿನ ಒಳಗೆ ಇಂಬಳ ಸೇರಿ ‘ಥಕಥೈ’ ನಾಟ್ಯ ಮಾಡಿಸುತ್ತಿದ್ದವು. ಕೊನೆಗೆ ಅವುಗಳ ಫಜೀತಿ ನೋಡಲಾಗದೇ ದೊಡ್ಡಣ್ಣ ನಶ್ಯದ ಪುಡಿ, ಅರಸಿನ ಪುಡಿ ಎಲ್ಲಾ ಸುರಿದು, ಇಂಬಳಗಳನ್ನ ಬಲವಂತವಾಗಿ ಎಳೆದು, ನಾಯಿಯನ್ನ ಇಂಬಳಗಳಿಂದ ರಕ್ಷಿಸುತ್ತಿದ್ದ. ಕಳೆದ ವರ್ಷ ನನ್ನವರ ಜೊತೆಗೆ ಅಣ್ಣನ ತೋಟದಲ್ಲಿ ನಡೆಯುವಾಗ ಅಣ್ಣ ಕಣ್ಸನ್ನೆಯಲ್ಲೇ ನನಗೆ ಇವರ ಕಾಲು ತೋರಿಸಿದ. ಬೆರಳಲ್ಲಿ ಇಂಬಳ ಕಚ್ಚಿ ರಕ್ತ ಸುರಿಯುತ್ತಿತ್ತು. ಮೊದಲೇ ಕಾಡು, ಹಾವು, ಜೇಡ ಎಂದರೆ ದೂರಸರಿಯುವ ಇವರಿಗೆ ಇನ್ನು ಇಂಬಳ ತೋರಿಸಿದರೆ ಖಂಡಿತಾ ಹೊರಗೇ ಕಾಲಿಡುವುದಿಲ್ಲ ಎಂದೆನಿಸಿ ಅಣ್ಣನಿಗೆ ಕಣ್ಸನ್ನೆಯಲ್ಲೇ ‘ಹೇಳ್ಬೇಡ’ ಅಂತ ಹೇಳಿದೆ. ಇವರಿಗೆ ಕಾಲಿನಲ್ಲಿ ಸುರಿಯುತ್ತಿದ್ದ ರಕ್ತ ನೋಡಿ ಆಶ್ಚರ್ಯ! ಹೇಗಾಯ್ತು.. ಅಂತ. ಇಲ್ಲಿಗೆ ವಾಪಸ್ಸು ಬಂದ ಮೇಲೆ ನಿಧಾನವಾಗಿ ನಾನು ವಿಷಯ ತಿಳಿಸಿದೆ. ಮಳೆಗಾಲದಲ್ಲಿ ಶ್ರಿಂಗೇರಿ ಹೋಗೋದು ಬೇಡ, ಹೋದರೆ ತೋಟಕ್ಕೆ ಕಾಲಿಡುವುದಿಲ್ಲ ಅಂತ ಇವರ ತೀರ್ಮಾನ ಆಗಿದೆ.!
ಕಪ್ಪೆಗಳಿಗೂ ಮಳೆಗಾಲಕ್ಕೂ ಜನ್ಮಾಂತರದ ನಂಟು. ನನ್ನ ತವರು ಮನೆ ತೋಟದ ಮಧ್ಯೆ ಇರುವುದರಿಂದ ಮಳೆಗಾಲದಲ್ಲಿ ಸಂಜೆಯ ನಂತರ ದೀಪ ಹಚ್ಚುವ ಸಮಯದಲ್ಲಿ ಮುಂದಿನ ಬಾಗಿಲು ತೆರೆದಿಟ್ಟರೆ ಸಣ್ಣಸಣ್ಣ ಕಪ್ಪೆಗಳು ೫೦ ರಿಂದ ೧೦೦ ರ ಸಂಖ್ಯೆಯಲ್ಲಿ ಮನೆಯ ಜಗುಲಿಯಲ್ಲಿ ಸೇರುತ್ತಿದ್ದವು. ಅವುಗಳನ್ನು ಹಿಡಿದು ಹೊರಗಟ್ಟುವುದು ನಮಗೆ ಆಟ. ಒಮ್ಮೆ ಸ್ಕೂಲಿನಲ್ಲಿ ನನ್ನ ಕೈ ಚೀಲ ತೆರೆಯುವಾಗ ಠಣ್ಣನೆ ಮೂರು ಕಪ್ಪೆಗಳು ಒಂದರ ಹಿಂದೆ ಒಂದು ಚೀಲದಿಂದ ಹೊರಜಿಗಿದವು. ರಾತ್ರಿ ಹೊರ ಜಗುಲಿಯಲ್ಲಿ ಇಟ್ಟಿದ್ದ ನನ್ನ ಚೀಲದಲ್ಲಿ ಈ ಕಪ್ಪೆಗಳು ಸೇರಿಕೊಂಡಿದ್ದವು. ತರಗತಿಯಿಂದ ಕಪ್ಪೆಗಳನ್ನು ಅಟ್ಟಿಸುವ ಕೆಲಸ ನನ್ನದೇ ಆಯ್ತು. ಇನ್ನೊಮ್ಮೆ ಪುಟ್ಟ ಕಪ್ಪೆಯೊಂದು ಹೋಮ್ ವರ್ಕ್ ಪುಸ್ತಕದಲ್ಲಿ ಸೇರಿ ಸತ್ತು ‘ಹರ್ಬೇರಿಯಮ್’ ಆಗಿತ್ತು. ಮಳೆ ಬರುವ ಮುಂಚೆ ಮಳೆಗಾಲದಲ್ಲಿ ಲಕಾ಼ಂತರ ಮಳೆಹುಳುಗಳು ರಾತ್ರಿ ದೀಪಕ್ಕೆ ಆಕರ್ಷಣೆ ಹೂಂದಿ ದೀಪದ ಸುತ್ತ ಹಾರಿ ಕೊನೆಗೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದು ಸಾಮಾನ್ಯ ನೋಟ.
ಅಮ್ಮನ ಇನ್ನೊಂದು ಆಕ್ಷೇಪಣೆ ಅಂದರೆ ಫೋನ್ ಮಾಡಿದಾಗ ‘ನಿಮ್ಮಲ್ಲಿ ಕರೆಂಟ್ ಹೋಗೋಲ್ವಾ (ಅಮೆರಿಕಾದಲ್ಲಿ!!). ಇಲ್ಲಿ ಕರೆಂಟ್ ಇಲ್ಲ ಕಣೆ, ಬೆಳಿಗ್ಗೆ ಹೋಗಿದೆ ನೋಡು ಇನ್ನೂ ಬಂದಿಲ್ಲ’ ಅನ್ನೋದು. ಕರೆಂಟಿಗೂ ಮಳೆಗೂ ವೈರತ್ವ. ಹಲವು ಬಾರಿ ವಾರಗಟ್ಟಲೆ ಕರೆಂಟ್ ಇಲ್ಲದೆ ಚಿಮಣಿ ಎಣ್ಣೆಯ ದೀಪದಲ್ಲಿ ರಾತ್ರಿ ಕಳೆಯುವುದು ಅಭ್ಯಾಸವಾಗಿತ್ತು. ಟಿ.ವಿ., ರೇಡಿಯೋ, ಟೇಪ್ ರೆಕಾರ್ಡ್... ಯಾವುದೂ ಕಾರ್ಯ ಮಾಡುತ್ತಿರುತ್ತಿರುವುದಿಲ್ಲ. ಕರೆಂಟ್ ಹೋದಾಗ ನನ್ನಮ್ಮ ಕೆ.ಇ.ಬಿ.ಗೆ ಫೋನ್ ಮಾಡಿ (ಪೋನ್ ಕೆಲಸ ಮಾಡ್ತಾ ಇದ್ರೆ) ‘ಕರೆಂಟ್ ಯಾವಾಗ ಬರುತ್ತೆ ಸರ್?’ ಅಂತ ಕೇಳೋಳು (ಈಗಲೂ ಅಷ್ಟೆ). ಕೆ.ಇ.ಬಿ. ಯಿಂದ ಯಾವಾಗಲೂ ಒಂದೇ ಉತ್ತರ: ’ಬರುತ್ತಮ್ಮ, ಯಾವಾಗ ಅಂತ ಹೇಳೋಕಾಗಲ್ಲ. ಕೊಪ್ಪದಲ್ಲೋ, ಬಾಳೆಹೊನ್ನೊರಿನಲ್ಲೋ ಲೈನ್ ಮೇಲೆ ಮರ ಬಿದ್ದಿದೆ, ರಿಪೇರೆ ನಡೀತಿದೆ’ ಅಂತ. ಸರಿ ಸಾಯಂಕಾಲ ನಾವೆಲ್ಲ ಸೀಮೆಯೆಣ್ಣೆಯ ಚಿಮಣಿ ಬುಡ್ದಿಗಳನ್ನೋ, ಲಾಟೀನನ್ನೋ ಹಚ್ಚಿಕೊಂಡು ಓದುತ್ತಿದ್ದೆವು. ಇದು ಎಲ್ಲರ ಮನೆಯ ಹಣೆಬರಹ. ಕೆಲವೊಮ್ಮೆ ಓದುತ್ತಾ ಕುಗುರಿ ಉರಿವ ದೀಪಕ್ಕೆ ನಮ್ಮ ಮುಂದಲೆಯ ಕೂದಲು ಸುಟ್ಟು ಹೋದದ್ದೂ ಉಂಟು.
ನಾವು ಸಣ್ಣವರಿದ್ದಾಗ ಶ್ರಿಂಗೇರಿಯಲ್ಲಿ ಸಿನೆಮಾ ನೋಡಲು ‘ಟೂರಿಂಗ್ ಟಾಕೀಸ್’ ಇತ್ತು. ಕೂರಲು ಮರದ ಬೆಂಚುಗಳು ಮತ್ತು ಕುರ್ಚಿ. ಕುರ್ಚಿ ಅಂದರೆ ಮರದ ಬೆಂಚಿಗೆ ಒರಗಲು ಹಿಂದೆ ಮಣೆಗಳನ್ನು ಹೊಡೆದಿರುತ್ತಿದ್ದರು. ನಮ್ಮ ಸಂಬಂಧಿಯೊಬ್ಬ ಇದಕ್ಕೆ ‘ಒರಗೋಬೆಂಚು’ ಅಂಥ ಹೆಸರಿಟ್ಟಿದ್ದ. ಒಂದು ಮತ್ತು ಎರಡು ರೂಪಾಯಿ ವ್ಯತ್ಯಾಸ ಎರಡಕ್ಕೂ. ಮಳೆಗಾಲ ಶುರುವಾಗುವಾಗ ಈ ಬೆಂಚುಗಳನ್ನೆಲ್ಲಾ ಕಿತ್ತು ತೆಗೆದು, ಮಳೆಗಾಲ ನಿಲ್ಲುವ ವೇಳೆ ಪುನಃ ಗೂಟ ಹಾಕಿ ಹುಗಿಯುತ್ತಿದ್ದರು. ತಲೆಯ ಮೇಲೆ ಬಟ್ಟೆಯ ಟೆಂಟು. ಕೆಲವೊಮ್ಮೆ ಸಿನೆಮ ನೋಡೋವಾಗ ಮಳೆ ಬಂದು, ಮಳೆಯ ಗಾನದ ಜೊತೆಗೇ ಸಿನೆಮಾ ಗಾನ ಮತ್ತು ಸಂಭಾಷಣೆ ಕೇಳುತ್ತಿದ್ದೆವು. ಸುರಿಯುತ್ತಿದ್ದ ಮಳೆಯಲ್ಲಿ ಛತ್ರಿ ಬಿಡಿಸಿ ಹಿಂದಿದ್ದವರಿಂದ ಬೈಸಿಕೊಂಡು ಸಿನೆಮಾ ನೋಡುವುದರಲ್ಲಿ ಎಂಥಾ ಆನಂದವಿತ್ತು ಅಂದರೆ, ಅನುಭವಿಸಿದವರಿಗೇ ಗೊತ್ತು ಅದರ ಮಜ!. ಇಂಥ ಮಳೆಯಲ್ಲೇ ಹಲವಾರು ಅಣ್ಣಾವ್ರ ಚಿತ್ರಗಳನ್ನು ನೋಡಿದ್ದು ಜ್ನಾಪಕ ಇದೆ..ಬಬ್ರುವಾಹನ, ಮಯೂರ, ಸನಾದಿ ಅಪ್ಪಣ್ಣ, ಗಂದಧ ಗುಡಿ, ಭಕ್ತಕುಂಬಾರ.. ಹಲವಾರು ಚಿತ್ರಗಳು. ಮಳೆ ಜಾಸ್ತಿಯಾದರೆ ಸಿನೆಮಾ ಆ ದಿನಕ್ಕೆ ಅರ್ಧಕ್ಕೇ ನಿಲ್ಲಿಸಿ ಪಾಸ್ ಕೊಟ್ಟು ಪುನಃ ಮರುದಿನ ನೋಡಲು ಬರಹೇಳುತಿದ್ದರು. ನಮಗೆ ಖುಷಿ..ಪುನಃ ಮೊದಲಿನಿಂದ ಸಿನೆಮಾ ನೋಡಬಹುದಲ್ಲ?!
ಮಳೆಗಾಲದಲ್ಲಿ ಹಬ್ಬಗಳ ಸಾಲೇ ಸಾಲು..ನಾಗರಪಂಚಮಿ, ಕೃಷ್ಣಾಷ್ಟಮಿ, ಗಣೇಶ ಚತುರ್ಥಿ, ಗೌರಿ ಹಬ್ಬ, ಶ್ರಾವಣದವರೆವಿಗೂ ಹಬ್ಬ ಹೀಗೆ...ಮುಂದುವರೆಯುತ್ತದೆ. ಕೃಷ್ಣಾಷ್ಟಮಿಯ ದಿನ ಮಳೆಯಲ್ಲೇ "ಮೊಸರುಕುಡಿಕೆ" ಒಡೆಯುವ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದ್ದೆವು. ಬಿದಿರಿನಿಂದ ಮಾಡಿದ "ಪೆಟ್ಲು" ಮತ್ತು "ಗಜ" ಹಿಡಿದು ಅದರೊಳಗೆ "ಅರಮಾಸಲು ಕಾಯಿ" ತೂರಿಸಿ ಮಡಿಕೆ ಒಡೆಯುವವನಿಗೆ ಹೊಡೆಯುವುದೇ ಸಂಭ್ರಮ. ಈಗೆಲ್ಲಾ ಈ ಆಟಗಳು ಮರೆಯಾಗುತ್ತಿವೆ. ಗೌರಿ ಹಬ್ಬಕ್ಕೆ ‘ಸೀತೆದಂಡೆ’ (ಆರ್ಕಿಡ್) ಹೂ ತರಲು ಕಾಡಿಗೆ ನುಗ್ಗುತ್ತಿದ್ದೆವು. ಸೀತೆದಂಡೆ ಹೂಗಳು ನೋಡಲು ಬಲು ಚಂದ. ಗೌರಿ ಮತ್ತು ಗಣೇಶನ ಮಂಟಪಕ್ಕೆ ‘ಸೀತೆದಂಡೆ’ ಮತ್ತು ‘ಡೇರೆ’ ಹೂವುಗಳಿಂದ ಶೃಂಗರಿಸಿ ಆನಂದಿಸುತ್ತಿದ್ದೆವು.
ಮಳೆಗಾಲದಲ್ಲೆ ಕೆಲಸಗಳೂ ಜಾಸ್ತಿ. ವ್ಯವಸಾಯಕ್ಕೆ ಭೂಮಿ ಹದ ಮಾಡುವುದು, ಭತ್ತ ಬೆಳೆಯಲು ಗದ್ದೆ ಸರಿ ಮಾಡೋದು, ಅಡಿಕೆ ಇರುವವರು ಔಷಧ ಹೊಡೆಯುವುದು..ಹಲವಾರು. ಗಂಡಾಳು, ಹೆಣ್ಣಾಳುಗಳೆಲ್ಲಾ ಕಂಬಳಿ ಕೊಪ್ಪೆ ಅಥವಾ ಗೊರಬಲು ಹೊದ್ದು ಗದ್ದೆಯಲ್ಲಿ ಕಳೆಕೀಳೋದು, ನೆಟ್ಟಿಮಾಡೋದು, ಗದ್ದೆ ಅಂಚುಕಡೆಯೋದು.. ಮುಂತಾದ ಕೆಲಸಗಳನ್ನ ಮಾಡ್ತಾರೆ. ಕೆಲವೊಮ್ಮೆ ರಜೆ ಇದ್ದಾಗ ನಾವೂ ನೆಟ್ಟಿ ಕೆಲಸಕ್ಕೆ ಹೋಗಿ ಮೈಯೆಲ್ಲಾ ಕೆಸರು ಮಾಡಿಕೊಂಡು ಬರುತ್ತಿದ್ಡೆವು. ಗದ್ದೆಯಲ್ಲಿ ಕೆಸರಿನಲ್ಲಿ ಇಳಿದಾಗ ಒಮ್ಮೆ ಕಾಲಿಗೆ ಏನೋ ಹಿಡಿದಂತಾಗಿ ನೀರಿನಿಂದ ಮೇಲೆ ಬಂದು ನೋಡಿದರೆ ಸಣ್ಣದೊಂದು ಏಡಿ ನನ್ನ ಕಾಲ್ಬೆರಳನ್ನು ಕಚ್ಚಿ ಕೂತಿತ್ತು. ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬಾಯಮ್ಮ ಕೆಲಸ ಮುಗಿದ ಮೇಲೆ ರಾತ್ರಿ ಸಾರಿಗೆ ಅಂತ ಏಡಿ ಹಿಡಿಯೋಕೆ ಹೋಗೋಳು. ಒಮ್ಮೆ ಮಳೆಯಲ್ಲಿ ನಾನೂ ಅವಳಿಗೆ ಏಡಿ ಹಿಡಿಯಲು ಗದ್ದೆಯಲ್ಲಿ ಸಹಾಯಕ್ಕೆ ಹೋದೆ ಮತ್ತು ಮನೆಯಲ್ಲಿ ಅಜ್ಜಿಯಿಂದ ಬೈಗುಳ ತಿಂದಿದ್ದೆ.
ಮಳೆಗಾಲದಲ್ಲಿ ಭೂಕುಸಿತ ಸಾಮಾನ್ಯ. ಶ್ರಿಂಗೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ‘ಕಾಗದಾಳಿ’ ಮಣ್ಣು ಸಾಮಾನ್ಯ. ಕಾಗದಾಳಿ ಮಣ್ಣಿನಲ್ಲಿ ‘ಕಾಗೆಬಂಗಾರ’ದ (ಮೈಕ) ಅಂಶ ಜಾಸ್ತಿ, ಹಾಗಾಗಿ ಮಣ್ಣು ತುಂಬಾ ನುಣುಪು. ಅರಿಯದೇ ಈ ಮಣ್ಣಿನ ಮೇಲೆ ಕಾಲಿಟ್ಟರೆ ಕಾಲುಜಾರಿ ಕೆಳ ಬೀಳೋದು ಸಾಮಾನ್ಯ. ಶ್ರಿಂಗೇರಿ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಗಳಿಗೆ ಈ ಅನುಭವ ಜಾಸ್ತಿ. ಮಳೆಗಾಲದಲ್ಲಿ ಕಾಲೇಜಿಗೆ ನಡೆದೇ ಹೋಗುತ್ತಿದ್ದ ನಮಗೆ ಕಾಲೇಜು ಗುಡ್ಡದಿಂದ ಇಳಿಯುವಾಗ ‘ಸ್ಕಿಯಿಂಗ್’ ಮಾಡಿದ ಅನುಭವ ಆಗುತಿತ್ತು. ಕಾಗದಾಳಿ ಮಣ್ಣಿನ ಈ ಗುಡ್ಡದಲ್ಲಿ ಮಳೆಗಾಲದಲ್ಲಿ ಕಾಲು ನಿಲ್ಲದೆ ಜಾರಿ ವಿದ್ಯಾರ್ಥಿಗಳು ಕೆಳ ಬೀಳೋದು ಅಥವ ಕಾಲು ಊರಲಾಗದೆ ‘ಸ್ಕಿಯಿಂಗ್’ ಮಾಡಿ ಗುಡ್ಡದ ಕೆಳ ಭಾಗ ಸೇರುವುದು ತುಂಬಾ ನಗೆ ತರೆಸುತ್ತಿತ್ತು.
೫೦ ವರ್ಷಗಳಿಂದ ವೈದ್ಯ ವೃತ್ತಿಯಲ್ಲಿರುವ ನಮ್ಮಪ್ಪ ಮಳೆಗಾಲದಲ್ಲಿ ಹಳ್ಳಿಗಳಿಗೆ ಕಾಲ್ನಡಿಗೆಯಲ್ಲೇ ರಾತ್ರಿ, ಬೆಳಿಗ್ಗೆ ಅಂತ ಭೇದ ನೋಡದೇ ರೋಗಿಗಳ ಸೇವೆ ಮಾಡುತ್ತಿದ್ದಾರೆ. ನಮಗೆ ಮಳೆಗಾಲದಲ್ಲಿ ಅವರು ಮನೆಗೆ ಸುರಕ್ಷಿತವಾಗೆ ತಲುಪುವವರೆಗೂ ಆತಂಕ. ಅವರು ಮನೆ ಬಾಗಿಲು ಬಡೆದಾಗ ನಮಗೆ ನಿರಾತಂಕ, ಜೊತೆಗೆ ಸದ್ದಿಲ್ಲದೇ ನಿದ್ರೆಗೆ ಜಾರುತ್ತಿದ್ದೆವು. ಅವರು ಹೇಳುವ ಮಳೆಗಾಲದ ಸ್ವಾರಸ್ಯದ ಅವರ ಅನುಭವಗಳು ಕೇಳುವಾಗ ಮೈನವಿರೇಳುತ್ತದೆ. ಒಮ್ಮೆ ರಾತ್ರಿಯಲ್ಲಿ ಹೆರಿಗೆಗೆಂದು ಹೊರಟು ಉಕ್ಕೇರುತ್ತಿದ್ದ ತುಂಗಾ ಪ್ರವಾಹವನ್ನು ಈಜಿ ದಾಟಿ ಮಳೆಯಲ್ಲಿ ಅತಿ ಕಡಿಮೆ ವ್ಯವಸ್ಥೆಯಲ್ಲಿ ಹೆರಿಗೆ ಮಾಡಿಸಿ ಮರುದಿನ ಮಧ್ಯಾಹ್ನ ಮನೆಗೆ ಬಂದು ಸೇರಿದ್ದರು. ರ್‍ಓಗಿಯ ಮನೆಯವರು ಅಮ್ಮನಿಗೆ ಈ ವಿಷಯ ತಿಳಿಸಿದ್ದರಂತೆ.
ಮಳೆ ಹಲವಾರು ಮಧುರ ನೆನಪುಗಳನ್ನೇ ಕೊಟ್ಟಿದೆ. ಆ ಕ್ಶಣದಲ್ಲಿ ಸುರಿಯುವ ಮಳೆಯನ್ನ ಬೈದರೂ ಮಳೆಗಾಲದ ಸೊಬಗು ಮರೆಯಲಾಗದಂತದ್ದು. ಅಮ್ಮನ ರುಚಿಯಾದ ಬಿಸಿಊಟ, ಅಮ್ಮನ ಸೀರೆಯಲ್ಲಿ ಮಾಡಿದ ಬೆಚ್ಚಗಿನ ಹೊದಿಕೆಗಳು, ಅಜ್ಜಿಯ ಬೆಚ್ಚಗಿನ ಮಡಿಲು....ಸುಂದರ ಶ್ರಿಂಗೇರಿ... ಮತ್ತೊಮ್ಮೆ ಆ ಮಧುರ ನೆನಪುಗಳನ್ನ ಹೊತ್ತು ತರುತ್ತದೆ.
Subscribe to:
Post Comments (Atom)
No comments:
Post a Comment